ಮಡಿಕೇರಿ:
ಬಡ ರೋಗಿಗಳ ಪಾಲಿನ ಆಶಾಕಿರಣ ಎಂದೇ ಬಿಂಬಿಸಲಾಗಿರುವ ಯಶಸ್ವಿನಿ ಯೋಜನೆ ರಾಜ್ಯದಲ್ಲಿ ಕಳೆದ ನವೆಂಬರ್‌ನಲ್ಲಿ ಮರು ಆರಂಭವಾಗಿದ್ದು, ಈ ಯೋಜನೆಗೆ ಕೊಡಗಿನಲ್ಲಿ ವಿವಿಧ ಸಹಕಾರ ಸಂಘಗಳ ೮೧ ಸಾವಿರ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಪರಿಷ್ಕೃತ ಯೋಜನೆಯಡಿ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ ೫ ಲಕ್ಷ ರೂ. ತನಕದ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆಯ ಅವಕಾಶವಿದೆ. ಯೋಜನೆ ಮತ್ತೆ ಆರಂಭವಾದ ನಂತರ ಜಿಲ್ಲೆಯಲ್ಲಿ ೧೧೯ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಸಹಕಾರಿ ಸಂಘಗಳ ಸದಸ್ಯರಿಗೆ ಹೊರೆಯಾಗದಂತೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ೨೦೦೩ರಲ್ಲಿ ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆ ಆರಂಭಿಸಿತ್ತು. ಇದು ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಒಂದು ’ಸ್ವಯಂ-ನಿಧಿ ಶಸ್ತ್ರಚಿಕಿತ್ಸಾ ಯೋಜನೆ’. ಒಂದು ವ?ರ್ದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತ್ರಚಿಕಿತ್ಸೆಯನ್ನು ನಿಗದಿತ ಮಿತಿಯೊಳಗೆ, ?ರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಟ್ರಸ್ಟ್??ನಿಂದ ಅಂಗೀಕೃತ ಯಾವುದೇ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದು.
೨೦೧೮ರ ಮೇ ೩೧ಕ್ಕೆ ರದ್ದಾಗಿದ್ದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಅದೇ ವರ್ಷ ಜೂ.೧ಕ್ಕೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಿಲೀನಗೊಳಿಸಲಾಗಿತ್ತು. ಈ ಯೋಜನೆಯನ್ನು ಮತ್ತೆ ಜಾರಿಗೆ ತರುವಂತೆ ರೈತರು ಮತ್ತು ಸಹಕಾರಿ ಸಂಘಗಳಿಂದ ಭಾರಿ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಹಾಗಾಗಿ ೨೦೨೨-೨೩ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ಯೋಜನೆ ಮರು ಆರಂಭವನ್ನು ಘೋಷಣೆ ಮಾಡಿ ೩೦೦ ಕೋಟಿ ರೂ. ತೆಗೆದಿಟ್ಟಿದ್ದರು. ನಂತರ ಕಳೆದ ವರ್ಷದ ನ. ೧ರಿಂದ ಯೋಜನೆಗೆ ನೋಂದಣಿ ಆರಂಭವಾಗಿತ್ತು.
ಮೊದಲು ೮೨೩ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿನಿ ಯೋಜನೆ ಅಡಿಯಲ್ಲಿ ಮಾಡಲಾಗುತ್ತಿತ್ತು. ಯೋಜನೆ ಮರು ಜಾರಿ ಆದ ನಂತರ ೧೬೫೦ ಬಗೆಯ ಶಸ್ತ್ರಚಿಕಿತ್ಸೆಗಳನ್ನು ಈ ಯೋಜನೆ ಅಡಿಯಲ್ಲಿ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಯಶಸ್ವಿನಿ ಯೋಜನೆಯ ಫಲಾನುಭವಿಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಲು ಸರ್ಕಾರಿ ಆಸ್ಪತ್ರೆಯ ಅನುಮತಿ ಬೇಡ. ಇದರಿಂದಾಗಿ ಸಮಯದ ಉಳಿತಾಯ ಆಗುತ್ತದೆ. ಜೊತೆಗೆ ಪರಿಣಾಮಕಾರಿ ಶಸ್ತ್ರಚಿಕಿತ್ಸೆ ಸೂಕ್ತ ಕಾಲದಲ್ಲಿ ಸಿಗುವಂತಾಗುತ್ತದೆ. ಇದರಿಂದಾಗಿ ರಾಜ್ಯದ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಸಿಗುವಂತಾಗಿದೆ. ಮೊದಲೇ ಹಣ ಕಟ್ಟಿ ದಾಖಲಾಗಬೇಕು ಎನ್ನುವ ಸಂಕಷ್ಟದಿಂದಲೂ ಮುಕ್ತಿ ಸಿಕ್ಕಂತಾಗಿದೆ.
ಸಹಕಾರಿ ಸಂಘ, ಸಹಕಾರಿ ಬ್ಯಾಂಕ್‌ಗಳ ರೈತ ಸದಸ್ಯರಲ್ಲದೆ ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು, ಸಹಕಾರಿ ನೇಕಾರರೂ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಮೂಲಕ ಯೋಜನೆ ಅನುಷ್ಠಾನದಲ್ಲಿದೆ. ಯೋಜನೆ ಅಡಿಯಲ್ಲಿ ನೋಂದಾಯಿತರಿಗೆ ಯೂನಿಕ್ ಐಡಿ ಸಂಖ್ಯೆಯುಳ್ಳ ಕಾರ್ಡ್ ನೀಡಲಾಗಿದೆ. ಯಶಸ್ವಿನಿ ಯೋಜನೆಗೆ ಕೊಡಗಿನಲ್ಲಿ ವಿವಿಧ ರೀತಿಯ ಸಹಕಾರ ಸಂಘಗಳ ಒಟ್ಟು ೮೧,೨೫೧ ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕೊಡಗು ಜಿಲ್ಲಾಸ್ಪತ್ರೆ, ಇಕ್ಷಾ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಕುಶಾಲನಗರ ಕಾವೇರಿ ಆಸ್ಪತ್ರೆ, ಲೈಫ್‌ಲೈನ್ ಆಸ್ಪತ್ರೆ, ಸ್ಮಿತಾ ಐ ಕೇರ್ ಆಸ್ಪತ್ರೆ, ವಿರಾಜಪೇಟೆ ತಾಲೂಕು ಸರ್ಕಾರಿ ಆಸ್ಪತ್ರೆ ಯಶಸ್ವಿ ಯೋಜನೆಯ ನೆಟ್‌ವರ್ಕ್ ಆಸ್ಪತ್ರೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಯೋಜನೆ ಮರು ಜಾರಿಗೆ ಬಂದ ಕಳೆದ ವರ್ಷದ ನ. ೧ರಿಂದನ ಜೂ.೩೦ರ ತನಕ ೩ ಪ್ರಮುಖ ಆಸ್ಪತ್ರೆಗಳಲ್ಲಿ ೧೧೯ ಫಲಾನುಭವಿಗಳು ೮,೮೧,೦೦೦ ರೂ. ಮೊತ್ತದ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಯಶಸ್ವಿನಿ ಯೋಜನೆಯ ಸದಸ್ಯರಿಗೆ ಜನರಲ್ ವಾರ್ಡ್‌ನಲ್ಲಿ ಚಿಕಿತ್ಸಾ ಸೌಲಭ್ಯ ಸಿಗುತ್ತದೆ. ಉನ್ನತ ವಾರ್ಡ್ ಬೇಕಿದ್ದಲ್ಲಿ ಶೇ ೧೫ ಅಥವಾ ಶೇ ೨೫ರಷ್ಟು ಹೆಚ್ಚಳದೊಂದಿಗೆ ಉನ್ನತ ವಾರ್ಡ್ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿದೆ. ಹಚ್ಚುವರಿ ಮೊತ್ತ ರೋಗಿಗಳೇ ಭರಿಸಬೇಕು. ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಒದಗಿಸಿರುವ ಚಿಕಿತ್ಸಾ ಸೌಲಭ್ಯದಲ್ಲಿ ಔಷಧಿ ವೆಚ್ಚ, ಆಸ್ಪತ್ರೆ ವೆಚ್ಚ, ಶಸ್ತ್ರಚಿಕಿತ್ಸೆಯ ವೆಚ್ಚ, ಆಪರೇಷನ್ ಥೀಯೆಟರ್ ಬಾಡಿಗೆ, ಅರವಳಿಕೆ ತಜ್ಞರ ಫೀ, ಸರ್ಜನ್ ಫೀ, ಕನ್ಸಲ್‌ಟೆಂಟ್ ಫೀ, ಬೆಡ್ ಚಾರ್ಜ್, ನರ್ಸ್ ಫೀ ಇತ್ಯಾದಿ ವೆಚ್ಚ ಒಳಗೊಂಡಿರುತ್ತದೆ.
ಭಾರತೀಯ ವೈದ್ಯಕೀಯ ಮಂಡಳಿ, ಕರ್ನಾಟಕ ಮೆಡಿಕಲ್ ಕೌನ್ಸಿಲ್ ಹಾಗೂ ಖಾಸಗಿ ಆಸ್ಪತ್ರೆಗಳ ಒಕ್ಕೂಟಗಳು ಈ ಹಿಂದೆ ಇದ್ದ ಯಶಸ್ವಿನಿ ಚಿಕಿತ್ಸಾ ದರಗಳಿಗಿಂತ ಈಗಿನ ದರಗಳು ಕಡಿಮೆ ಇರುವುದಾಗಿಯೂ, ರಾಷ್ಟ್ರಮಟ್ಟದಲ್ಲಿ ಆಯುಷ್ಮಾನ್ ಭಾರತ್ ದರಗಳು ಹೆಚ್ಚಿದ್ದರೂ, ರಾಜ್ಯದಲ್ಲಿ ಕಡಿಮೆ ದರಗಳನ್ನು ನಿಗದಿಪಡಿಸಿರುವುದಾಗಿ ಆಕ್ಷೇಪಿಸಿ ಯಶಸ್ವಿನಿ ಯೋಜನೆಯಲ್ಲಿ ನೋಂದಣಿಯಾಗಿರುವುದಿಲ್ಲ. ಇದರಿಂದಾಗಿ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ಪಡೆಯಲು ಕೆಲವು ಕಡೆಗಳಲ್ಲಿ ಕಷ್ಟವಾಗುತ್ತಿದೆ.
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ರೆಫರಲ್ ವ್ಯವಸ್ಥೆ ಇರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಚಿಕಿತ್ಸೆಗೆ ಅವಕಾಶವಿರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಆಸ್ಪತ್ರೆಗಳ ನಿರ್ವಹಣೆ, ಮೂಲ ಸೌಕರ್ಯಗಳು, ತಜ್ಞ ವೈದ್ಯರಿಗೆ ಹೆಚ್ಚಿನ ವೇತನ ನೀಡಬೇಕಾಗಿರುವುದರಿಂದ ನಿಗದಿಪಡಿಸಿರುವ ದರಗಳಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ನಿಗದಿಪಡಿಸಿರುವ ದರಗಳು ಸಾಕಾಗುವುದಿಲ್ಲ ಎಂದು ಆಸ್ಪತ್ರೆಗಳ ಪರವಾಗಿ ಪ್ರತಿಭಟನೆ ವ್ಯಕ್ತಪಡಿಸಿ ಸರ್ಕಾರಕ್ಕೆ ಮತ್ತು ಯಶಸ್ಸಿನಿ ಟ್ರಸ್ಟ್‌ಗೆ ಮನವಿಗಳನ್ನು ನೀಡಿ ಹೆಚ್ಚಿನ ಆಸ್ಪತ್ರೆಗಳು ಯಶಸ್ವಿನಿ ಯೋಜನೆಯಲ್ಲಿ ಪಾಲ್ಗೊಳ್ಳದಂತೆ ತಡೆಹಿಡಿದಿರುವುದೂ ನಡೆದಿದೆ. ಇದರಿಂದಾಗಿ ಕೆಲವೆಡೆ ಯೋಜನೆಗೆ ಹಿನ್ನಡೆ ಆದರೂ, ಬಹುತೇಕ ಫಲಾನುಭವಿಗಳಿಗೆ ಲಾಭವಾಗಿದೆ.