ಪಾ. ಶ್ರೀ ಅನಂತರಾಮ್ ಕೋಲಾರ
ಕೋಲಾರ ನಗರ, ಬಂಗಾರಪೇಟೆ, ಮಾಲೂರು ಪಟ್ಟಣ ಹಾಗೂ 45 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಜಾರಿಗೊಳಿಸಿರುವ ಯರಗೋಳ್ ಯೋಜನೆಯ ಬಾಕಿ ಕಾಮಗಾರಿಗೆ 127.76 ಕೋಟಿ ರೂ. ನೀಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಬಂಗಾರಪೇಟೆಯ ಮಾರ್ಕಾಂಡೇಯ ಕಿರು ಜಲಾಶಯ ತುಂಬಿದ ಸಂದರ್ಭದಲ್ಲಿ ವ್ಯರ್ಥವಾಗಿ ಹೋಗುತ್ತಿದ್ದ ನೀರನ್ನು ಸಂಗ್ರಹಿಸಲು ಯರಗೋಳ್ ಗ್ರಾಮದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ 2006ರಲ್ಲಿ ಆಗಿನ ಸರ್ಕಾರ ಚಿಂತಿಸಿತ್ತು. ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ಹಾಲಿ ಸಿಎಂ ಬಿ.ಎಸ್.ಯಡಿಯೂರಪ್ಪ 50 ಕೋಟಿ ರೂ. ಬಜೆಟ್‌ನಲ್ಲಿ ಘೋಷಿಸಿದ್ದರು.
ಇದೇ ವೇಳೆ ಕೇಂದ್ರ ಸರ್ಕಾರ ಕುಡಿಯುವ ನೀರಿನ ಯೋಜನೆಗಾಗಿ 82 ಕೋಟಿ ರೂ.ಗಳನ್ನು ನೀಡಿದ್ದನ್ನು ಆಗಿನ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವರ್ತೂರು ಪ್ರಕಾಶ್ ಯರಗೋಳ್ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಬಳಸಿಕೊಂಡಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶಾಸಕ ರಮೇಶ್‌ಕುಮಾರ್ ಎಲ್ಲ ಶಾಸಕರನ್ನು ಒಗ್ಗೂಡಿಸಿ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿಸಿದ್ದರು.
ಪ್ರಸ್ತುತ 160 ಕೋಟಿ ರೂ. ವೆಚ್ಚದಲ್ಲಿ 500 ಎಂಸಿಎಫ್‌ಟಿ ಸಾಮರ್ಥ್ಯದ ಡ್ಯಾಂ ಗುತ್ತಿಗೆ ವಹಿಸಿಕೊಂಡಿದ್ದ ಹೈದ್ರಾಬಾದ್‌ನ ಮೆ. ರಾಮ್ಕಿ ಇನ್‌ಫ್ಟ್ರಾಸ್ಟ್ರಕ್ಚರ್ ಪ್ರೈ. ಲಿ. ಕಾಮಗಾರಿ ಪೂರ್ಣಗೊಳಿಸಿದೆ. ಜಾಕ್‌ವೆಲ್ ಕಂ ಪಂಪ್‌ಹೌಸ್ ಹಾಗೂ ಏರುಕೊಳವೆ ಮಾರ್ಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ಬಾಕಿ ಇರುವ ವಿದ್ಯುತ್ ಮೋಟಾರ್ ಖರೀದಿ, ವಿದ್ಯುತ್ ಸಂಪರ್ಕ, ಕೋಲಾರದಲ್ಲಿ ನಾಲ್ಕು ಓವರ್‌ಹೆಡ್ ಟ್ಯಾಂಕ್ ನಿರ್ಮಾಣ, ಪೈಪ್‌ಲೈನ್ ಅಳವಡಿಕೆಗೆ ಅನುದಾನದ ಒದಗಿಸಲು ಶಾಸಕರು ಸಿಎಂ ಮೇಲೆ ಒತ್ತಡ ಹೇರಿದಾಗ ಕ್ರಮದ ಜತೆಗೆ 2021ರ ಜ. 27ಕ್ಕೆ ಡ್ಯಾಂ ಲೋಕಾರ್ಪಣೆ ಮಾಡಲು ಬರುವುದಾಗಿ ಭರವಸೆ ನೀಡಿದ್ದರು.
ಅದರಂತೆ ಸೋಮವಾರ ನಡೆದ ಸಚಿವ ಸಂಪುಟದಲ್ಲಿ 127.76 ಕೋಟಿ ರೂ. ಬಿಡುಗಡೆ ಮಾಡಲು ತೀರ್ಮಾನಿಸಿದ್ದು, ಯೋಜನೆಗೆ ಹಿಡಿದಿರುವ ಗ್ರಹಣ ಶೀಘ್ರ ಮೋಕ್ಷ ಕಾಣುವ ಆಶಾಭಾವ ಮೂಡಿದೆ.
ಕೆಸಿ ವ್ಯಾಲಿ ನೀರನ್ನು ಡ್ಯಾಂಗೆ ಹರಿಸದಂತೆ ಸಂಬಂಧಪಟ್ಟ ಇಲಾಖೆಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮಳೆ ನೀರು ಸಂಗ್ರಹವಾದರೆ ಮಾತ್ರ ಯರಗೋಳ್ ಯೋಜನೆ ಯಶಸ್ವಿಯಾಗಿ ಮೂರು ತಾಲೂಕುಗಳಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯ ಸಿಕ್ಕೀತು.
ಯರಗೋಳ್ ಯೋಜನೆಯ ಬಾಕಿ ಕಾಮಗಾರಿಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಮೋಟಾರ್ ಖರೀದಿ, ವಿದ್ಯುತ್ ಸಂಪರ್ಕ ಹಾಗೂ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಬಳಸಲಾಗುವುದು. ಯೋಜನೆಯ ಪ್ರಾರಂಭಿಕ ಮೊತ್ತ 240 ಕೋ.ರೂ. ಆಗಿತ್ತು. ಈಗಾಗಲೆ 244 ಕೋಟಿ ರೂ. ಖರ್ಚಾಗಿರುವುದರಿಂದ ಉಳಿದ ಕಾಮಗಾರಿಗಳಿಗೆ ಹಣದ ಅವಶ್ಯಕತೆ ಇತ್ತು. ಶ್ರೀನಿವಾಸರೆಡ್ಡಿ, ಕಾರ್ಯಪಾಲಕ ಇಂಜಿನಿಯರ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಣ್ಣ, ಮಧ್ಯಮ ಹಾಗೂ ನಗರ ಪಟ್ಟಣಗಳ ಮೂಲಸೌಕರ್ಯಗಳ ಅಭಿವೃದ್ಧಿ ನಿಧಿಯಡಿ ಯರಗೋಳ್ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಬಾಕಿ ಕಾಮಗಾರಿಗಳಿಗೆ ಹಣ ಒದಗಿಸಲು ಆಡಳಿತಾತ್ಮಕ ಒಪ್ಪಿಗೆ ನೀಡಿರುವುದರಿಂದ ಆದಷ್ಟು ಬೇಗ ಯೋಜನೆ ಲೋಕಾರ್ಪಣೆಯಾಗುವ ವಿಶ್ವಾಸ ಮೂಡಿದೆ. ಮೂರು ನಗರ, ಪಟ್ಟಣ ಹಾಗೂ ಈ ಮಾರ್ಗದ 45 ಹಳ್ಳಿಗಳ ಜತೆ ಹೆಚ್ಚುವರಿಯಾಗಿ 24 ಹಳ್ಳಿಗಳಿಗೆ ನೀರು ಕೊಡಲು ಪರಿಷ್ಕೃತ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಎಚ್. ನಾಗೇಶ್, ಜಿಲ್ಲಾ ಉಸ್ತುವಾರಿ ಸಚಿವ