ಮೈಸೂರು: ಯರಗನಹಳ್ಳಿಯಲ್ಲಿ ಅನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಮನೆಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂ. ನಂತೆ 12 ಲಕ್ಷ ರೂ. ಪರಿಹಾರ ನೀಡಲಾಗುವುದು. ಮೃತರಾದ ಕುಮಾರಸ್ವಾಮಿ- ಮಂಜುಳಾ ದಂಪತಿ ಕುಟುಂಬದವರು ಈ ಪರಿಹಾರವನ್ನು ಹಂಚಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅನಿಲ ಸೋರಿಕೆಯಿಂದ ಒಂದೇ ಕುಟುಂಬ ನಾಲ್ವರು ಮೃತಪಟ್ಟಿರುವುದು ತುಂಬಾ ದುಃಖದ ವಿಚಾರ. ಗಂಡ ಹೆಂಡತಿ ಇಬ್ಬರು ಒಳಗೆ ಮಲಗಿದ್ದರು. ಇಬ್ಬರು ಮಕ್ಕಳು ಹೊರಗಡೆ ಹಾಲ್‌ನಲ್ಲಿ ಮಲಗಿದ್ದರು. ಎಲ್ಲರು ನಿದ್ರೆಯಲ್ಲೇ ಪ್ರಾಣ ಬಿಟ್ಟಿದ್ದಾರೆ. ಮೃತರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಮತ್ತು ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯೊಳಗೆ ತೆರಳಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇಡೀ ಮನೆಗೆ ಒಂದೇ ಕಿಟಕಿ ಇದ್ದು, ಕಿಟಕಿ ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಸೋರಿಕೆಯಾದ ಅನಿಲ ಹೊರಗೆ ಹೋಗದೆ ನಾಲ್ವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹಾಗೂ ಇತರರು ಇದ್ದರು.