ಎನ್.ಆರ್.ಪುರ ತಾಲೂಕು ಸುತ್ತ ಗ್ರಾಮದ ಭತ್ತದ ಗದ್ದೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಯಂತ್ರಶ್ರೀ ಪದ್ಧತಿಗೆ ಚಾಲನೆ ನೀಡಿದರು. ಶಿವಕುಮಾರ್, ಶಂಕರ್, ಮಮತಾ, ದೀಕ್ಷಿತ್ ಇತರರಿದ್ದರು. 
ಜಿಲ್ಲೆ

200 ಎಕರೆ ಗದ್ದೆಯಲ್ಲಿ ಯಂತ್ರಶ್ರೀ ನಾಟಿ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 200 ಎಕರೆ ಭತ್ತದ ಗದ್ದೆಯಲ್ಲಿ ಯಂತ್ರಶ್ರೀ ಯೋಜನೆಯಡಿ ಭತ್ತ ನಾಟಿ ಮಾಡಲಾಗುವುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪ, ಎನ್.ಆರ್.ಪುರ ತಾಲೂಕಿನ ಕೃಷಿ ಮೇಲ್ವಿಚಾರಕ ಶಿವಕುಮಾರ್ ತಿಳಿಸಿದರು.

ಕೈಮರ ವಲಯದ ಸುತ್ತ ಗ್ರಾಮದ ರಾಘವ ಪೂಜಾರಿ ಹಾಗೂ ದಿನೇಶ್ ಪೂಜಾರಿ ಅವರ 3 ಎಕರೆ ಭತ್ತದ ಗದ್ದೆಯಲ್ಲಿ ಯಂತ್ರದ ಮೂಲಕ ನಾಟಿ ಕಾರ್ಯದಲ್ಲಿ ಮಾತನಾಡಿ, ಇತ್ತೀಚಿನ ವಷರ್ಗಳಲ್ಲಿ ಭತ್ತದ ಗದ್ದೆಗಳನ್ನು ಹಾಳು ಬಿಡಲಾಗುತ್ತಿದೆ. 5 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಯಂತ್ರಶ್ರೀ ಭತ್ತದ ಬೇಸಾಯ ಪದ್ಧತಿ ರೈತರಿಗೆ ಪ್ರಾತ್ಯಕ್ಷಿಕೆಯೊಂದಿಗೆ ತಿಳಿಸುತ್ತಿದ್ದೇವೆ. ಸುತ್ತ ಗ್ರಾಮದಲ್ಲಿ ಅಂದಾಜು 60 ಎಕರೆ ಗದ್ದೆಯಲ್ಲಿ ಯಂತ್ರಶ್ರೀ ಪದ್ಧತಿಯಲ್ಲಿ ಬೇಸಾಯ ಮಾಡಲಾಗುತ್ತಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಮಾತನಾಡಿ, ಇತ್ತೀಚೆಗೆ ರೈತರು ಭತ್ತ ಬೆಳೆಯುವುದನ್ನು ಕಡಿಮೆ ಮಾಡಿ ವಾಣಿಜ್ಯ ಬೆಳೆ ಬೆಳೆಯುತ್ತಾರೆ. ಆದರೆ ಆಹಾರ ಬೆಳೆ ಅತಿ ಅವಶ್ಯಕವಾಗಿದ್ದು, ಯಂತ್ರಶ್ರೀ ಪದ್ಧತಿ ಪ್ರಕಾರ ಭತ್ತ ಬೆಳೆದರೆ ಖರ್ಚು ಕಡಿಮೆಯಾಗಲಿದೆ ಎಂದು ಹೇಳಿದರು.
ಗುಬ್ಬಿಗಾ ಗ್ರಾಪಂ ಉಪಾಧ್ಯಕ್ಷ ಶಂಕರ್, ಕೃಷಿ ಇಲಾಖೆ ಸಹಾಯಕ ಪ್ರಬಂಧಕಿ ಮಮತಾ, ಸಿಎಚ್‌ಎಸ್‌ಸಿ ಪ್ರಬಂಧಕ ದೀಕ್ಷಿತ್, ರೈತರು ಇದ್ದರು.