dav 
ಜಿಲ್ಲೆ

ಗುರುಭವನಕ್ಕೆ ಕೂಡಿಬರದ ಕಾಲ

ಕಿರಣ್ ಮಾದರಹಳ್ಳಿ

ಯಳಂದೂರು: ತಾಲೂಕು ಕೇಂದ್ರದಲ್ಲಿ ಗುರುಭವನ ನಿರ್ಮಾಣಕ್ಕೆ ಇನ್ನೂ ಗುರುಬಲ ಕೂಡಿಬಂದಿಲ್ಲ. ದಶಕಗಳ ಹೋರಾಟಕ್ಕೆ ಈಗಲಾದರೂ ಮುಕ್ತಿ ಸಿಗಬಹುದು ಎಂಬ ಸಣ್ಣ ಆಶಾಭಾವ ಇಲ್ಲಿನ ಶಿಕ್ಷಕರಲ್ಲಿ ಮೂಡಿದೆ.

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 265, ಪ್ರೌಢಶಾಲೆಗಳಲ್ಲಿ 80 ಮತ್ತು ಅನುದಾನ ರಹಿತ ಶಾಲೆಗಳು ಸೇರಿದಂತೆ ತಾಲೂಕಿನಲ್ಲಿ 500ಕ್ಕೂ ಹೆಚ್ಚಿನ ಶಿಕ್ಷಕರಿದ್ದಾರೆ. 2003ರಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಬಳಿಯಿರುವ ಸ್ಥಳದಲ್ಲಿ ಗುರುಭವನ ನಿರ್ಮಾಣ ಮಾಡಲು ಅಂದಿನ ಚಾಮರಾಜನಗರ ಸಂಸದ ಹಾಗೂ ಕೇಂದ್ರ ಸಚಿವರೂ ಆಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಭೂಮಿಪೂಜೆ ನೆರವೇರಿಸಿದ್ದರು. ಈಗಲೂ ಅವರೇ ಸಂಸದರಾಗಿದ್ದಾರೆ. ಆದರೆ, ಈ ಸ್ಥಳ ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ಇಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ಹಲವು ತಾಂತ್ರಿಕ ತೊಡಕುಗಳು ಆದವು. ಈ ಹಿನ್ನೆಲೆಯಲ್ಲಿ ಕೆಲಸ ನನೆಗುದಿಗೆ ಬಿತ್ತು. ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಎನ್.ಮಹೇಶ್ ಅವರಿಗೂ ಶಿಕ್ಷಕರ ಸಂಘದ ಸದಸ್ಯರು ಗುರುಭವನ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದ್ದರು. ಆಗಲೂ ಬೇಡಿಕೆ ಈಡೇರಲಿಲ್ಲ.

ನಂತರ ಶಿಕ್ಷಣ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಸುರೇಶ್‌ಕುಮಾರ್ ಅವರಿಗೂ ಈ ಬಗ್ಗೆ ಮನವಿ ಮಾಡಲಾಗಿತ್ತು. ಆಗಲೂ ಸ್ಥಳ ಗುರುತಿಸಿ ನೀಡಲು ಮುಂದಾಗಲಿಲ್ಲ ಎಂಬುದು ಶಿಕ್ಷಕರ ಅಳಲು. ಯಳಂದೂರು ತಾಲೂಕಿನಲ್ಲಿ ಸುಸಜ್ಜಿತ ಗುರುಭವನ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಈಗಲಾದರೂ ಸಂಬಂಧಪಟ್ಟ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಜಾಗ ದೊರಕಿಸಿಕೊಟ್ಟು ಗುರುಭವನ ನಿರ್ಮಾಣಕ್ಕೆ ಕ್ರಮ ವಹಿಸಲು ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ ಶಿಕ್ಷಕರು.

ದುರ್ದೈವವೇ ಸರಿ !
ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ತಾಲೂಕು ಕೇಂದ್ರಗಳಲ್ಲಿ ಗುರುಭವನ ನಿರ್ಮಿಸಲಾಗಿದೆ. ಇತ್ತೀಚೆಗೆ ತಾಲೂಕು ಕೇಂದ್ರವಾದ ಹನೂರಿನಲ್ಲೂ ಗುರುಭವನಕ್ಕೆ ಸ್ಥಳ ಗುರುತಿಸಲಾಗಿದೆ. ಆದರೆ, ಹಲವು ದಶಕಗಳಿಂದಲೂ ತಾಲೂಕು ಕೇಂದ್ರವಾಗಿರುವ ಯಳಂದೂರಿನಲ್ಲಿ ಭವನ ನಿರ್ಮಾಣಕ್ಕೆ ಸತತ ಮನವಿ ಮಾಡುತ್ತಿದ್ದರೂ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ, ಸ್ಥಳೀಯ ಪಂಚಾಯಿತಿ ಸ್ಥಳ ಗುರುತಿಸಿ ನೀಡದಿರುವುದು ದುರ್ದೈವವೇ ಸರಿ. ಇನ್ನಾದರೂ ಯಳಂದೂರು ಪಟ್ಟಣದಲ್ಲಿ ಗುರುಭವನ ನಿರ್ಮಾಣಕ್ಕೆ ತಕ್ಷಣ ಮುಂದಾಗಬೇಕೆಂದು ಶಿಕ್ಷಕರು ಮನವಿ ಮಾಡಿದ್ದಾರೆ.

ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 500ಕ್ಕೂ ಹೆಚ್ಚು ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಸಭೆ, ಕಾರ್ಯಕ್ರಮಗಳ ಆಯೋಜನೆಗೆ ಭವನದ ಅವಶ್ಯಕತೆ ಇದೆ. ಈ ಹಿಂದೆ ಇದಕ್ಕೆ ಹಲವು ಪ್ರಯತ್ನಗಳು ನಡೆದಿವೆ. ಪ್ರಸ್ತುತ ಶಾಸಕರಾಗಿರುವ ಎ.ಆರ್.ಕೃಷ್ಣಮೂರ್ತಿ ಅವರು ತಾಲೂಕಿನಲ್ಲಿ ಜಾಗವನ್ನು ಗುರುತಿಸಿಕೊಟ್ಟು ಗುರುಭವನ ನಿರ್ಮಾಣಕ್ಕೆ ಮುಂದಾಗಬೇಕಿದೆ.