ಜಿಲ್ಲೆ

ಶಾಸಕ ಹೆಬ್ಬಾರ್‌ ಕಾಂಗ್ರೆಸ್‌ ಸೇರ್ಪಡೆ ವಿಚಾರ-ಯಲ್ಲಾಪುರ ಕೈ ಸಭೆಯಲ್ಲಿ ಚರ್ಚೆ

ಯಲ್ಲಾಪುರ: ಕೇವಲ ದುಡ್ಡಿನಿಂದ ರಾಜಕೀಯ ಮಾಡುತ್ತೇವೆ ಎನ್ನುವ ಭ್ರಮೆಯನ್ನು ದೂರಮಾಡಲು ಕಾರ್ಯಕರ್ತರು ಒಗ್ಗೂಡಿಸಿ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಯಲ್ಲಾಪುರ ಕ್ಷೇತ್ರದ ಉಸ್ತುವಾರಿ, ಮಾಜಿ ಶಾಸಕ ವಿ ಎಸ್ ಪಾಟೀಲ್ ಹೇಳಿದರು.

ಅವರು ಗುರುವಾರ ಪಟ್ಟಣದ ಕಲ್ಮಠದಲ್ಲಿ ನೂತನ ಬ್ಲಾಕ್ ಕಚೇರಿಯಲ್ಲಿ ಕಿರವತ್ತಿ ಭಾಗದ ಮುಖಂಡ ವಿಲ್ಸನ್ ಫರ್ನಾಂಡೀಸ್ ಹಾಗೂ ಕಾರ್ಯಕರ್ತರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದರು. ಸ್ಥಳೀಯ ಶಾಸಕರೇ ಎಲ್ಲ ಸ್ಥಾನಿಕ ಅಧಿಕಾರ ಬಳಸಿಕೊಂಡು, ಅಧಿಕಾರ ವಿಕೇಂದ್ರೀಕರಣವ ವ್ಯವಸ್ಥೆಯನ್ನು ದುರ್ಬಳಕೆ  ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸಂಘಟನೆಯ ಮುಖಾಂತರ ಪಕ್ಷ ಬಲಪಡಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕಾಂಗ್ರೆಸ್ ಮುಖಂಡ ಟಿ ಸಿ ಗಾಂವ್ಕಾರ ಮಾತನಾಡಿ, ದ್ರೋಹ ಮಾಡಿ ಪಕ್ಷದಿಂದ ಹೊರಕ್ಕೆ ಹೋದವರು ಯಾರೂ ಪಕ್ಷಕ್ಕೆ ಮತ್ತೆ ಬರುವ ಅಗತ್ಯ ಇಲ್ಲ. ಹಳಬರು, ಹೊಸಬರು ಬೇಧ ಇಲ್ಲದೇ ಒಗ್ಗೂಡಿ ಕೆಲಸ‌ ಮಾಡಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಭಟ್ಟ ಮೆಣಸುಪಾಲ್ ಅಧ್ಯಕ್ಷತೆ ವಹಿಸಿದ್ದರು.  ಕಾಂಗ್ರೆಸ್ ಮುಖಂಡರಾದ‌ ಉಲ್ಲಾಸ ಶಾನಭಾಗ, ರವಿ ನಾಯ್ಕ, ರಾಘವೇಂದ್ರ ಭಟ್ಟ ಹಾಸಣಗಿ, ನರಸಿಂಹ ನಾಯ್ಕ, ವಿ ಎಸ್ ಭಟ್ಟ, ನೂರ್ ಅಹಮ್ಮದ್, ಅನಿಲ್ ಮರಾಠೆ, ಪೂಜಾ ನೇತ್ರೇಕರ್ ಇತರರಿದ್ದರು.