ಯಲ್ಲಾಪುರ: ಸತ್ಯವನ್ನು ಶೋಧಿಸಿ, ಅರಿತು ನಂತರ ವರದಿ ಮಾಡುವುದು ಪತ್ರಕರ್ತನ ಕರ್ತವ್ಯವಾಗಬೇಕು. ಸಾಮಾಜಿಕ ಆಗುಹೋಗುಗಳಿಗೆ ಸ್ಪಂದಿಸುವ ಗುಣ, ಚಿಕಿತ್ಸಕ ದೃಷ್ಟಿಕೋನ ಪತ್ರಕರ್ತನಿಗೆ ಇರಬೇಕು ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಹೇಳಿದರು.
ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಲ್ಲಾಪುರ ಘಟಕ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರವೃತ್ತಿ ಕರ್ತವ್ಯ ಪ್ರಜ್ಞೆಯಿಂದ, ಪರರ ಹಿತಕ್ಕಾಗಿ ಮಾಡುವ ಕಾರ್ಯ. ಪತ್ರಿಕೋದ್ಯಮವನ್ನು ಪ್ರವೃತ್ತಿಯಾಗಿ ಸ್ವೀಕರಿಸಿದವರು ಆ ಕ್ಷೇತ್ರಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಅನೇಕ ಪತ್ರಕರ್ತರು ಪತ್ರಿಕೋದ್ಯಮದ ಪ್ರವೃತ್ತಿಯನ್ನೇ ವೃತ್ತಿಯಾಗಿಸಿಕೊಂಡು ಸಾಧನೆ ಮಾಡಿದ್ದಾರೆ. ಪತ್ರಿಕೋದ್ಯಮದ ಘನತೆಯನ್ನು ಹೆಚ್ಚಿಸುವಲ್ಲಿ ಜಿಲ್ಲೆಯ ಕೊಡುಗೆ ಅಪಾರ. ಇದನ್ನು ಮುಂದುವರಿಸಿಕೊಂಡು ಹೋಗುವ ಹೊಣೆ ನಮ್ಮ ಮೇಲಿದೆ ಎಂದರು.
ಕರ್ನಾಟಕ ಪತ್ರಿಕೋದ್ಯಮದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಪತ್ರಿಕೆ ಆರಂಭವಾದುದು ಪರ್ವಕಾಲ. ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದವರು ಡಾ. ವಿಜಯ ಸಂಕೇಶ್ವರ ಅವರು. ನಮ್ಮಂತಹ ಅನೇಕ ಪತ್ರಕರ್ತರ ಬದುಕು ರೂಪಿಸಲು ಕಾರಣರಾಗಿದ್ದಾರೆ. ಅವರ ಹೆಸರಿನಲ್ಲಿ ಪತ್ರಿಕೋದ್ಯಮ ಶಿಕ್ಷಣ ನೀಡಲು ಮುಂದಾಗಿದ್ದೇವೆ ಎಂದರು.
‘ವಿಜಯವಾಣಿ’ ಸುದ್ದಿ ಸಂಪಾದಕ ಹಾಗೂ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ನ ಪ್ರಾಂಶುಪಾಲ ನಾಗರಾಜ ಇಳೆಗುಂಡಿ, ‘ಮಾಧ್ಯಮದಲ್ಲಿ ಇಂದಿನ ಸವಾಲು’ ಕುರಿತು ಉಪನ್ಯಾಸ ನೀಡಿ, ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಗಳ ಆಯಾಮ ಬದಲಾಗಿದೆ. ಪರ್ಯಾಯ ಮಾಧ್ಯಮಗಳ ಬೆಳವಣಿಗೆಯಿಂದ ಮುದ್ರಣ ಮಾಧ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಡಿಜಿಟಲ್ ಮಾಧ್ಯಮಗಳಲ್ಲಿ ಎಲ್ಲರಿಗಿಂತ ಬೇಗ ಸುದ್ದಿ ಕೊಡುವ ಅವಸರದಿಂದ ಅವಾಂತರಗಳು ಉಂಟಾದ ನಿದರ್ಶನಗಳಿವೆ. ಸುದ್ದಿಗಳ ವಿಶ್ವಾಸಾರ್ಹತೆಗಾಗಿ ಪತ್ರಿಕೆಗಳನ್ನು ಅವಲಂಬಿಸುವಂತಾದಾಗ ಮುದ್ರಣ ಮಾಧ್ಯಮಗಳು ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ. ಸುದ್ದಿಗಳನ್ನು ವಿಭಿನ್ನ
ವಿಶ್ಲೇಷಣೆ ಮೂಲಕ ನೀಡಿದಾಗ ಮುದ್ರಣ ಮಾಧ್ಯಮಗಳು ವಿಶೇಷವಾಗಿ ಮನ್ನಣೆ ಗಳಿಸಲು ಸಾಧ್ಯ. ಸ್ವಾತಂತ್ರೃ ಮತ್ತು ಸ್ವೇಚ್ಛೆಯ ನಡುವಿನ ವ್ಯತ್ಯಾಸದ ಸೂಕ್ಷ್ಮತೆ ಅರಿತು ನಡೆದರೆ ಡಿಜಿಟಲ್ ಮಾಧ್ಯಮವೂ ಹೆಚ್ವು ಪರಿಣಾಮ ಕಾರಿಯಾಗಬಹುದು ಎಂದರು. ಸತ್ಯಾಂಶ, ವಿಶ್ಲೇಷಣೆಯೊಂದಿಗೆ ಒಳನೋಟವನ್ನು ತೆರೆದಿಡುವ ಮೂಲಕ ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ಸಕಾರಾತ್ಮಕ ಪತ್ರಿಕೋದ್ಯಮ ಇಂದಿನ ಅಗತ್ಯವಾಗಿದೆ. ಈ ಬಗೆಗೆ ಗಂಭೀರ ಚಿಂತನೆ ನಡೆಯದೆ ಹೋದರೆ ಪತ್ರಿಕೋದ್ಯಮ ಪ್ರಸ್ತುತತೆ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದರು. ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಮೂಲಕ ಸುಸಂಸ್ಕೃತ, ಸಮಾಜಮುಖಿ ಪತ್ರಕರ್ತರನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು.
ಯೂನಿಯನ್ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಯೂನಿಯನ್ ಉಪಾಧ್ಯಕ್ಷ ವಿಶ್ವೇಶ್ವರ ಗಾಂವ್ಕರ, ಕಾರ್ಯದರ್ಶಿ ಕೇಬಲ್ ನಾಗೇಶ, ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ ಮದ್ಗುಣಿ ಕಾರ್ಯಕ್ರಮ ನಿರ್ವಹಿಸಿದರು.