ಯಲ್ಲಾಪುರ: ರಸ್ತೆ ಪಕ್ಕ ಮೂತ್ರ ವಿಸರ್ಜನೆ ಮಾಡುತ್ತಿದ್ದವರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದ್ದರಿಂದ ಕ್ರೂಸರ್ನಲ್ಲಿದ್ದ ಒಬ್ಬ ಸ್ಥಳದಲ್ಲೇ ಮೃತಪಟ್ಟು, ಎಂಟು ಜನರು ಗಾಯಗೊಂಡ ಘಟನೆ ತಾಲೂಕಿನ ಕಿರವತ್ತಿ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳದ ಲಕ್ಕಮ್ಮ ಶಾಲೆಯ ಶಿಕ್ಷಕ ಹನುಮಂತಪ್ಪ (40) ಮೃತ ವ್ಯಕ್ತಿ. ರಸ್ತೆ ಪಕ್ಕ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಬೆಳಗಾವಿಯ ತೇಜು ಕೋಡೆ, ಲಕ್ಷ್ಮಣ ರಾವೂರ, ಕ್ರೂಸರ್ನಲ್ಲಿದ್ದ ಮುಧೋಳದ ಲಕ್ಕವ್ವ, ಶಾಂತವ್ವ ಬಡಿಗೇರ, ಬಸು ಕುಂಬಾರಪ್ಪ, ಬಸವರಾಜ ಕುಂಬಾರ, ಪ್ರಭು ಯಾದವ, ಬಸವರಾಜ ಹೂಗಾರ ಗಾಯಗೊಂಡವರು.
ಯಲ್ಲಾಪುರದಿಂದ ಹುಬ್ಬಳ್ಳಿ ಕಡೆಗೆ ಬೈಕ್ನಲ್ಲಿ ಹೋಗುತ್ತಿದ್ದ ತೇಜು ಮತ್ತು ಲಕ್ಷ್ಮಣ ಎಂಬುವರು ರಸ್ತೆ ಪಕ್ಕ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಆ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ಬೈಕ್ಗೆ ಡಿಕ್ಕಿ ಹೊಡೆದು, ಬದಿಯಲ್ಲಿ ನಿಂತಿದ್ದ ಸವಾರರಿಗೂ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.