ಯಲಬುರ್ಗಾದಲ್ಲಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ 137ನೇ ವರ್ಷದ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಡಿಡಿಪಿಐ ಸೋಮಶೇಖರಗೌಡ ಪಾಟೀಲ್ಉದ್ಘಾಟಿಸಿದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಗೌಡ್ರು, ಕೆಎಂಎಫ್ ನಿರ್ದೇಶಕ ಹಂಪಯ್ಯ ಹಿರೇಮಠ, ಸ.ನೌ.ಸಂ ತಾಲೂಕು ಅಧ್ಯಕ್ಷ ಸಿದ್ಧಲಿಂಗಪ್ಪ ಶ್ಯಾಗೋಟಿ ಇತರರಿದ್ದರು. 
ಜಿಲ್ಲೆ

ಶಿಷ್ಯರನ್ನು ಯಶಸ್ಸಿನ ದಡ ಸೇರಿಸಲು ಮುಂದಾಗಿ

ಶ್ರೀನಾಥ

ಯಲಬುರ್ಗಾ: ಶಿಕ್ಷಕರು ಮಕ್ಕಳ ಭವಿಷ್ಯ ಬರೆಯುವ ಮಹಾನ್ ಸಾಧಕರಾಗಿದ್ದು, ಅವರನ್ನು ಯಾವಾಗಲೂ ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ಡಿಡಿಪಿಐ ಸೋಮಶೇಖರಗೌಡ ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ 137ನೇ ವರ್ಷದ ಜನ್ಮದಿನ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದಿನ ಕಾಲದಲ್ಲಿದ್ದ ಗುರುಕುಲ ಪದ್ಧತಿಯಲ್ಲಿ ಗುರುಗಳು ತಮ್ಮ ಮನೆಗಳಲ್ಲೇ ಶಿಷ್ಯರಿಗೆ ವಸತಿ ಕಲ್ಪಿಸಿ ಸಮಗ್ರ ಶಿಕ್ಷಣ, ಮೌಖಿಕ ಬೋಧನೆ ಮತ್ತು ಜೀವನ ಕೌಶಲಗಳನ್ನು ನೀಡುತ್ತಿದ್ದರು.

ಇದು ಶಿಸ್ತುಬದ್ಧ ದಿನಚರಿ, ಧಾರ್ಮಿಕ ಮತ್ತು ನೈತಿಕ ಶಿಕ್ಷಣ, ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುತಿತ್ತು.  ಸ್ವಾತಂತ್ರೃದ ನಂತರ ನಮ್ಮ ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ.12ರಷ್ಟು ಮಾತ್ರ ಇತ್ತು.

ಕ್ರಮೇಣ ಶೈಕ್ಷಣಿಕ ಕ್ಷೇತ್ರದಲ್ಲಿ ಶಾಲಾ-ಕಾಲೇಜುಗಳನ್ನ ನಿರ್ಮಿಸಿ, ವಸತಿ ನಿಲಯಗಳನ್ನು ಜಾರಿಗೆ ತಂದು ದೊಡ್ಡ ಕ್ರಾಂತಿಯನ್ನೇ ಮಾಡಲಾಯಿತು. ಶಿಕ್ಷಕರಾದವರು ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸಿದಾಗ ಬೆಲೆ ಬರುತ್ತದೆ.

ಶಿಕ್ಷಕರ ವೃತ್ತಿಯಲ್ಲಿ ಸಚ್ಚಾರಿತ್ರೃವಂತರಾಗಿ ಮಕ್ಕಳ ಜೀವನವನ್ನು ಯಶಸ್ಸಿನ ದಡ ಸೇರಿಸಲು ಮುಂದಾಗಬೇಕೆಂದು ಹೇಳಿದರು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಗೌಡ್ರು ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾದ್ಯಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು.

ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕೊರ್ಲಳ್ಳಿ, ಕೆಎಂಎಫ್ ನಿರ್ದೇಶಕ ಹಂಪಯ್ಯ ಹಿರೇಮಠ, ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮಾಸ್ತಿ, ಸ.ನೌ.ಸಂ ತಾಲೂಕು ಅಧ್ಯಕ್ಷ ಸಿದ್ಧಲಿಂಗಪ್ಪ ಶ್ಯಾಗೋಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಧರಣಾ, ಅಕ್ಷರ ದಾಸೋಹ ಎಡಿ ಟಿ.ಜೆ.ದಾಣಿ ಇತರರಿದ್ದರು.