ಯಲಬುರ್ಗಾ ತಾಪಂ ಸಭಾಂಗಣದಲ್ಲಿ ಮಹಾತ್ಮಗಾಂಧಿ ನರೇಗಾ ಕ್ರಿಯಾ ಯೋಜನೆ ತಯಾರಿಕೆಯಡಿ ಕಾಮಗಾರಿ ಆಯ್ಕೆಯ ಪೂರ್ವಭಾವಿ ಹಂತದ ಯುಕ್ತಧಾರ ಆ್ಯಪ್ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ತಾಪಂ ಸಹಾಯಕ ನಿರ್ದೇಶಕ ಹನಮಂತಗೌಡ ಪೊಲೀಸ್ ಪಾಟೀಲ್ ಉದ್ಘಾಟಿಸಿದರು. ವಲಯ ಅರಣ್ಯಾಧಿಕಾರಿಗಳಾದ ಬಸವರಾಜ ಗೋಗೇರಿ, ರೇಷ್ಮೆ ವಿಸ್ತೀರ್ಣಾಧಿಕಾರಿಗಳಾದ ಹಸೇನ್ ಇತರರಿದ್ದರು. 
ಜಿಲ್ಲೆ

ಯುಕ್ತಧಾರ ಆ್ಯಪ್‌ನಿಂದ ಅನುಕೂಲ

ಯಲಬುರ್ಗಾ: ನರೇಗಾ ಯೋಜನೆಯಡಿ ಇನ್ನು ಮುಂದೆ ತಯಾರಾಗುವ ಕ್ರಿಯಾಯೋಜನೆಯು ಯುಕ್ತಧಾರ ಆ್ಯಪ್ ಮೂಲಕ ಕಾರ್ಯನಿರ್ವಹಿಸಲಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಹನಮಂತಗೌಡ ಪೊಲೀಸ್ ಪಾಟೀಲ್ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ 2026-27 ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಕ್ರಿಯಾ ಯೋಜನೆ ತಯಾರಿಕೆಯಡಿ ಕಾಮಗಾರಿ ಆಯ್ಕೆಯ ಪೂರ್ವಭಾವಿ ಹಂತದ ಯುಕ್ತಧಾರ ಆ್ಯಪ್ ಬಗ್ಗೆ ಪಂಚಾಯಿತಿ ಪಿಡಿಒ, ಅನುಷ್ಠಾನ ಇಲಾಖೆ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಕಂಪ್ಯೂಟರ್ ಅಪರೇಟರ್‌ದಾರರಿಗೆ ಮಾಹಿತಿ ನೀಡಲು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದಿಂದ ನಿರ್ಮಾಣ ಮಾಡಿರುವ ಹೊಸ ವೈಜ್ಞಾನಿಕ ಮಾದರಿ ಕಾಮಗಾರಿ ಆಯ್ಕೆ ಮಾಡುವ ಒಂದು ಹಂತವಾಗಿದೆ. ಇದರಿಂದಾಗಿ ನರೇಗಾ ಯೋಜನೆಯ ಉದ್ದೇಶ ಸಾಕಾರಗೊಳ್ಳುತ್ತದೆ ಎಂದರು.

ಕುಕನೂರು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಭೌತಿಕ ಕ್ರಿಯಾಯೋಜನೆ ಬದಲು ಆನ್‌ಲೈನ್‌ನಲ್ಲಿ ನಲ್ಲಿ ಕ್ರಿಯಾಯೋಜನೆಯ ಹಂತವಾಗಿದೆ. ಇದರಿಂದಾಗಿ ಯಾವ ಸ್ಥಳದಲ್ಲಿ ಎಂಥಹ ಕಾಮಗಾರಿ ತೆಗೆದುಕೊಳ್ಳಬೇಕು. ಅದು ಆ ಸ್ಥಳಕ್ಕೆ ಸೂಕ್ತವಾಗಿದೆಯೇ ಎಂಬುದನ್ನು ತೀರ್ಮಾನಿಸಿ ಅನುಷ್ಠಾನ ಮಾಡುವ ಪ್ರಕ್ರಿಯೆಯಾಗಿದೆ ಎಂದರು.

ತರಬೇತಿಯ ಮಾಸ್ಟರ್ ಟ್ರೇನರ್‌ಗಳಾದ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ ಪಿಪಿಟಿ ಮೂಲಕ ತರಬೇತಿ ನೀಡಿದರು. ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ಗ್ರಾಪಂ ಪಿಡಿಒಗಳು, ಅನುಷ್ಠಾನ ಇಲಾಖೆಯ ಕ್ಷೇತ್ರ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ, ತಾಲೂಕು ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು ಎಲ್ಲ ತಾಂತ್ರಿಕ ಸಹಾಯಕರು, ಕಂಪ್ಯೂಟರ್ ಆಪರೇಟರ್‌ಗಳು ಇತರರಿದ್ದರು.