ಯಲಬುರ್ಗಾ: ರಾಜ್ಯ ವಸತಿ ಶಾಲೆಗಳ ನೌಕರರ ಸಂಘದಿಂದ ಹೊಸಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ ಗುರುವಾರ ಕರ್ತವ್ಯಕ್ಕೆ ಹಾಜರಾದರು.
ಕರ್ನಾಟಕದಲ್ಲಿ 830 ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಅದರಡಿ 8,000 ಖಾಯಂ ಸಿಬ್ಬಂದಿ ಹದಿಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ನ್ಯಾಯವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಸರ್ಕಾರ ನೀಡದ ಹಿನ್ನೆಲೆಯಲ್ಲಿ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹಕ್ಕೆ ಕುಳಿತುಕೊಂಡಿದ್ದರು.
ಅದರ ಮುಂದುವರೆದ ಭಾಗವಾಗಿ ಶಾಲಾ ಹಂತದಲ್ಲಿ ಈ ಪ್ರತಿಭಟನೆ ಮುಂದುವರೆದಿದೆ. ನೌಕರರು ತಮಗೆ ದೊರೆಯಬೇಕಾದ ಕೆಜಿಐಡಿ ಸೌಲಭ್ಯ, ವಸತಿ ನಿರ್ದೇಶನಾಲಯ, ಡಿಸಿಆರ್‌ಜಿ ಸೌಲಭ್ಯ, ಶೇ. 10 ಹೆಚ್ಚುವರಿ ವೇತನ, ಗೃಹ ಬಾಡಿಗೆ ವಿನಾಯಿತಿ, ಸೌಲಭ್ಯಗಳನ್ನು ಈ ಕೂಡಲೇ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಸಿಬ್ಬಂದಿ ರಾಜೇಶ್ವರಿ ಬಿರಾದಾರ್, ರವೀಂದ್ರ ಮಾಳೆ ಕೊಪ್ಪ, ರೇಣುಕಾ ಪಾಟೀಲ್, ಕಳಕೇಶ ಅರಕೇರಿ, ಮಲ್ಲಿಕಾರ್ಜುನ ಅಂಗಡಿ, ಶಿವಲೀಲಾ ಜಕ್ಕಲಿ, ಮಂಜುಳಾ ನರೇಂದ್ರ, ಫಾತಿಮಾ ಬೆಟಗೇರಿ ಇತರರಿದ್ದರು.