Oplus_131072 
ಜಿಲ್ಲೆ

ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ

ಯಳಂದೂರು: ತಾಲೂಕಿನ ಕೆ.ದೇವರಹಳ್ಳಿ ಗ್ರಾಮದ ರೈತ ಮರಿಸ್ವಾಮಪ್ಪ ಅವರ ಮೇಲೆ ಅರಣ್ಯ ಇಲಾಖೆ ವಾಚರ್ ಹಲ್ಲೆ ನಡೆಸಿರುವುದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ತಾಲೂಕಿನ ಕಾಡಂಚಿನ ಗ್ರಾಮಗಳಾದ ಕೆ. ದೇವರಹಳ್ಳಿ, ಶಿವಕಳ್ಳಿ, ಮಲಾರಪಾಳ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರು ಇಲ್ಲಿನ ಸರ್ಕಾರಿ ಗೋಮಾಳದಲ್ಲಿ ಜಾನುವಾರು ಮೇಯಿಸಲು ತೆರಳುತ್ತಾರೆ. ಇವರು ಪ್ರತಿನಿತ್ಯ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಇಲಾಖೆಯ ವಾಚರ್ ಕೆ.ದೇವರಹಳ್ಳಿ ಗ್ರಾಮದ ರೈತ ಮರಿಸ್ವಾಮಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಖಂಡನೀಯ. ರೈತರು ಅರಣ್ಯದೊಳಗೆ ಜಾನುವಾರುಗಳನ್ನು ಬಿಡುವುದಿಲ್ಲ. ಸರ್ಕಾರಿ ಗೋಮಾಳಗಳಲ್ಲಿ ಜಾನುವಾರುಗಳನ್ನು ಮೇಯಿಸಲು ತೆರಳುತ್ತಾರೆ. ಆದರೆ, ಅರಣ್ಯ ಇಲಾಖೆ ಸಿಬ್ಬಂಬಿ ಇಲ್ಲೂ ಜಾನುವಾರುಗಳನ್ನು ಮೇಯಿಸಲು ಅವಕಾಶ ನೀಡುತ್ತಿಲ್ಲ ಎಂಬ ದೂರಿದೆ. ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.


ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಎಫ್‌ಒ ನಾಗೇಂದ್ರನಾಯಕ್, ಇಲಾಖೆ ಸಿಬ್ಬಂದಿಯಿಂದ ಹಲ್ಲೆಯಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ. ಮುಂದೆ ರೈತರಿಗೆ ಇಲಾಖೆಯಿಂದ ಯಾವುದೆ ತೊಂದರೆಯಾಗದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡುತ್ತೇನೆ ಎಂದರು.ನಂತರ ಎಸ್‌ಬಿಐ ಬ್ಯಾಂಕ್ ಬಳಿ ಬಂದ ಪ್ರತಿಭಟನಾಕಾರರು, ಪಿಎಂ ಕಿಸಾನ್ ಯೋಜನೆ, ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಹಣವನ್ನು ಸಾಲಕ್ಕೆ ವಜಾ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಈ ಹಿಂದೆ ಸಂಬಂಧಪಟ್ಟ ಲೀಡ್ ಬ್ಯಾಂಕಿನ ವ್ಯವಸ್ಥಾಪಕರು ಸಾಲಕ್ಕೆ ವಜಾ ಮಾಡಿಕೊಳ್ಳಬಾರದು ಎಂದು ಸೂಚನೆ ನೀಡಿದ್ದರೂ ಅದನ್ನೇ ಮುಂದುವರಿಸಿದ್ದಾರೆ ಎಂದು ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು. ನಂತರ ಬ್ಯಾಂಕ್ ವ್ಯವಸ್ಥಾಪಕ ಹೀಗಾಗದಂತೆ ಕ್ರಮ ವಹಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಸಂಘದ ತಾಲೂಕು ಅಧ್ಯಕ್ಷ ಸಿದ್ಧಲಿಂಗಸ್ವಾಮಿ, ಸದಸ್ಯರಾದ ಗೌಡಹಳ್ಳಿ ಸ್ವಾಮಿ, ವಷಭೇಂದ್ರ, ಷಡಕ್ಷರಿ, ಶಿವರುದ್ರಪ್ಪ, ಮಹದೇವಸ್ವಾಮಿ ಇದ್ದರು.