ಜಿಲ್ಲೆ

ನರೇಗಾ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ

ಯಳಂದೂರು: ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಸೇರಿದಂತೆ ಇತರ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ತಿಳಿಸಿದರು.

ತಾಲೂಕಿನ ಅಂಬಳೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. ಪಂಚಾಯಿತಿಯಲ್ಲಿ ನರೇಗಾ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ಮೂಲ ಸಮಸ್ಯೆಗಳ ನಿವಾರಣೆಗೆ ಸಂಬಂಧಪಟ್ಟವರು ಸಹಕರಿಸುತ್ತಿಲ್ಲ ಎಂದು ಕೆಲವು ಸಾರ್ವಜನಿಕರು ದೂರಿದರು. ಈ ಬಗ್ಗೆ ಮಾತನಾಡಿದ ಸಿಇಒ ಪಂಚಾಯಿತಿಯಲ್ಲಿ ಬೀದಿ ದೀಪ, ರಸ್ತೆ, ಚರಂಡಿ, ನರೇಗಾ ಕಾಮಗಾರಿ, ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಇಡುವುದೂ ಸೇರಿದಂತೆ 21 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ನರೇಗಾ ಎಡಿ, ತಾಪಂ ಇಒ ಹಾಗೂ ಗ್ರಾಪಂ ಪಿಡಿಒಗೆ ಮಾಹಿತಿ ನೀಡುತ್ತೇನೆ ಎಂದು ಭರವಸೆ ನೀಡಿದರು.

ಬಳಿಕ ಪಿಡಿಒ ಸಿ.ಎನ್.ಕಾವ್ಯಾ ಮಾತನಾಡಿ, ನನಗೆ ಕೂಲಿ ಬೇಕು ಎಂದು ಜಾಬ್ ಕಾರ್ಡ್ ಪಡೆದಿರುವ ಕೂಲಿ ಕಾರ್ಮಿಕರು ನಮೂನೆ 6 ರಲ್ಲಿ ಅರ್ಜಿ ಸಲ್ಲಿಸಿಲ್ಲ. ಅವರು ಅರ್ಜಿ ಕೊಟ್ಟರೆ ಕೂಡಲೇ ಅವರಿಗೆ ಕೂಲಿ ನೀಡಲಾಗುವುದು. ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮಗಳಲ್ಲೂ ಕಾಮಗಾರಿಗಳಿದ್ದು ಕೂಡಲೇ ಕ್ರಮ ಬದ್ಧವಾಗಿ ಅರ್ಜಿ ನೀಡಿದರೆ ಕೂಲಿ ನೀಡಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ ಉಪಾಧ್ಯಕ್ಷೆ ಮಹಾದೇವಮ್ಮ, ಸದಸ್ಯರಾದ ಮಹದೇವಸ್ವಾಮಿ, ರಾಣಿ, ಸಿದ್ದನಾಯಕ, ರಾಜಣ್ಣ ಇಒ ಉಮೇಶ್, ಸ್ವಾಮಿ, ರೇವಣ್ಣ ಸಿಇಒ ಆಪ್ತ ಕಾರ್ಯದರ್ಶಿ ಕೆ.ಭರತ್‌ರಾಜ್, ನರೇಗಾ ಎಡಿ ರಾಧಾ, ಕಾರ್ಯದರ್ಶಿ ಪುಟ್ಟರಾಜು, ನಂದಿನಿ, ಮುಖಂಡರಾದ ಕುಮಾರ್, ನಿಂಗರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.