ಜಿಲ್ಲೆ

ಪಪಂ ಗಾದಿಗೆ ಮಹಿಳೆಯರ ಪೈಪೋಟಿ

ಕಿರಣ್ ಮಾದರಹಳ್ಳಿ

ಯಳಂದೂರು: ನನೆಗುದಿಗೆ ಬಿದ್ದಿದ್ದ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಎರಡೂ ಸ್ಥಾನಗಳು ಮಹಿಳೆಯರಿಗೇ ಮೀಸಲಾಗಿದ್ದು, ಈಗಿನಿಂದಲೇ ಮಹಿಳೆಯರು ಪೈಪೋಟಿ ನಡೆಸಿದ್ದಾರೆ.

ಈಗಿರುವುದು 10 ಜನ ಸದಸ್ಯರು ಮಾತ್ರ: ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 11 ಸದಸ್ಯರಿದ್ದಾರೆ. ಆದರೆ 5ನೇ ವಾರ್ಡಿನ ಕೆ.ಮಲ್ಲಯ್ಯ ಅವರು ನಿಧನ ಹೊಂದಿದ್ದರಿಂದ ಪಂಚಾಯಿತಿಯಲ್ಲಿ ಈಗ 10 ಸದಸ್ಯರು ಮಾತ್ರ ಇದ್ದಾರೆ. ಅದರಲ್ಲಿ 9 ಜನ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದು, 4ನೇ ವಾರ್ಡಿನ ಸವಿತಾ ಬಸವರಾಜು ಮಾತ್ರ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಈಗಿರುವ ಒಟ್ಟು 10 ಸದಸ್ಯರಲ್ಲಿ ಐವರು ಮಹಿಳಾ ಸದಸ್ಯರೇ ಇದ್ದಾರೆ. ಉಳಿದ 5 ಸದಸ್ಯರು ಪುರುಷರಾಗಿದ್ದಾರೆ. ಶಾಸಕ ಹಾಗೂ ಸಂಸದರೂ ಕಾಂಗ್ರೆಸ್ ಪಕ್ಷದವರೇ ಆಗಿರುವುದರಿಂದ ಈ ಬಾರಿಯೂ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಯನ್ನು ಹಿಡಿಯುವ ಸಾಧ್ಯತೆ ದಟ್ಟವಾಗಿದೆ.

ಮತ್ತದೆ ಮೀಸಲು: ಈ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾಗಿತ್ತು. ಈ ಬಾರಿಯೂ ಇದೆ ಮೀಸಲಾತಿಯನ್ನು ನಿಗದಿ ಮಾಡಿರುವುದರಿಂದ ಮತ್ತೆ ಮಹಿಳೆಯರಿಗೆ ಈ ಗಾದಿ ಒಲಿದು ಬಂದಿದೆ. ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು 11ನೇ ವಾರ್ಡಿನ ಶಾಂತಮ್ಮ ನಿಂಗರಾಜು ಹಾಗೂ 7ನೇ ವಾರ್ಡಿನ ಪ್ರಭಾವತಿ ರಾಜಶೇಖರ್ ಅಧಿಕಾರ ನಡೆಸಿದ್ದರು. ಉಪಾಧ್ಯಕ್ಷ ಸ್ಥಾನವನ್ನು 10ನೇ ವಾರ್ಡಿನ ಲಕ್ಷ್ಮೀ ಮಲ್ಲು ಮೊದಲನೇ ಪೂರ್ಣಾವಧಿ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು.

ಸುಶೀಲಾ, ಲಕ್ಷ್ಮೀ ನಡುವೆ ಅಧ್ಯಕ್ಷಗಾದಿ ಪೈಪೋಟಿ: ಕಾಂಗ್ರೆಸ್ ಪಕ್ಷದಲ್ಲೇ 4 ಮಹಿಳೆಯರು ಇರುವುದರಿಂದ ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದವರನ್ನು ಹೊರತುಪಡಿಸಿದರೆ 9ನೇ ವಾರ್ಡಿನ ಸುಶೀಲಾ ಪ್ರಕಾಶ್ ಹಾಗೂ 10ನೇ ವಾರ್ಡಿನ ಲಕ್ಷ್ಮೀ ಮಲ್ಲು ಈ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇದರ ನಡುವೆ ಪಕ್ಷದ ವರಿಷ್ಠರು, ಇತರ ಸಹ ಸದಸ್ಯರು ಯಾರ ಕಡೆ ಒಲಿಯುತ್ತಾರೆ ಎಂದು ಕಾದು ನೋಡಬೇಕಿದೆ.
ಇದರ ನಡುವೆ ಪ್ರಭಾವತಿ ಹಾಗೂ ಶಾಂತಮ್ಮ ಮತ್ತೊಮ್ಮೆ ಅಧಿಕಾರವನ್ನು ಹಿಡಿಯಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಹಾಗಾಗಿ ಅಧ್ಯಕ್ಷಗಾದಿ ಯಾರಿಗೆ ಒಲಿಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರೇ ಅಭ್ಯರ್ಥಿಗಳು: ಉಪಾಧ್ಯಕ್ಷ ಸ್ಥಾನವು ಬಿಸಿಎ ಮಹಿಳೆಗೆ ಮೀಸಲಾಗಿದ್ದು, ಇದಕ್ಕೆ 10ನೇ ವಾರ್ಡಿನ ಕುರುಬ ಸಮುದಾಯಕ್ಕೆ ಸೇರಿರುವ ಲಕ್ಷ್ಮಿ ಮಲ್ಲು, ಹಾಗೂ 11ನೇ ವಾರ್ಡಿನ ಉಪ್ಪಾರ ಸಮುದಾಯಕ್ಕೆ ಸೇರಿರುವ ಶಾಂತಮ್ಮ ನಿಂಗರಾಜು ಇಬ್ಬರು ಮಾತ್ರ ಇದ್ದಾರೆ. ಇವರಿಬ್ಬರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಅನುಭವಿಸಿರುವ ಸದಸ್ಯರೇ ಆಗಿದ್ದು, ಇವರಲ್ಲಿ ಈ ಬಾರಿ ಯಾರು ಉಪಾಧ್ಯಕ್ಷರಾಗುತ್ತಾರೆ ಎಂಬ ಕುತೂಹಲವೂ ಇದೆ.

ಈಗಾಗಲೇ ಯಳಂದೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿ ನಿಗದಿಯಾಗಿದೆ. ಈ ಬಗ್ಗೆ ನಮ್ಮ ಪಕ್ಷದ ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಶಾಸಕರು ಹಾಗೂ ಸಂಸದರು, ಮಾಜಿ ಶಾಸಕರು ಪಕ್ಷದ ವರಿಷ್ಠರು ಹಾಗೂ ಮುಖಂಡರೊಂದಿಗೆ ಚರ್ಚಿಸಿ ಇವೆರಡು ಸ್ಥಾನಗಳಿಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತೇವೆ.ಎಚ್.ವಿ.ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ