ಯಳಂದೂರು: ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ರಸ್ತೆಯಲ್ಲೇ ಮಡುಗಟ್ಟಿ ನಿಂತಿರುವ ಕಲುಷಿತ ನೀರು…ನೀರಿನ ಮೇಲೆ ಸೊಳ್ಳೆಗಳ ಹಿಂಡು…ಮಳೆ ಬಂದರೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಕಲುಷಿತ ನೀರು….ಹಳ್ಳ ಬಿದ್ದ ರಸ್ತೆಗಳಲ್ಲಿ ಸಾಗುವ ಅನಿವಾರ್ಯತೆ… ಒಡೆದು ಹೋಗಿರುವ ಕುಡಿವ ನೀರಿನ ಪೈಪ್‌ಲೈನ್…!
ಇದು ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಂದಹಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ಸ್ಥಿತಿ. ಬಡಾವಣೆಯಿಂದ ಅಂಬಳೆ ಗ್ರಾಮದ ಚಾಮುಂಡೇಶ್ವರಿ ದೇಗುಲಕ್ಕೆ ಸಾಗುವ ಪ್ರಮುಖ ರಸ್ತೆಯಲ್ಲಿ ಚರಂಡಿ ನಿರ್ಮಾಣವಾಗದೆ, ಇದ್ದ ಹಳೇ ಚರಂಡಿ ಮುಚ್ಚಿ ಹೋಗಿದ್ದು ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಈ ರಸ್ತೆ ಹಳ್ಳಕೊಳ್ಳಗಳಿಂದ ಕೂಡಿದ್ದು, ಕಚ್ಚಾ ರಸ್ತೆಯಾಗಿದೆ. ಮಳೆ ಬಂದರೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಇಲ್ಲಿನ ಚರಂಡಿಯ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ. ಇಲ್ಲಿರುವ ಅನೇಕ ಮನೆಗಳು ಕಚ್ಚಾ ಮನೆಗಳಾಗಿದ್ದು, ಅನೇಕ ಮನೆಗಳ ಗೋಡೆಗಳು ಬಿದ್ದು ಹೋಗಿವೆ. ಇಲ್ಲಿಗೆ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹಾದು ಹೋಗುವಂತೆ ಮಾಡಿ ಎಂದು ಅನೇಕ ಬಾರಿ ಮನವಿ ಮಾಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸುತ್ತಿಲ್ಲ.
ಗ್ರಾಮದ ಕಚ್ಚಾ ರಸ್ತೆಯಲ್ಲಿ ಸಂಚರಿಸುವ ಸ್ಥಿತಿ : ಎಷ್ಟೋ ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ರಸ್ತೆ ಇದೀಗ ದುಸ್ಥಿತಿ ತಲುಪಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಮಳೆ ನೀರು ರಸ್ತೆಯಲ್ಲೂ ನಿಲ್ಲದೆ ಚರಂಡಿಯಲ್ಲೂ ನಿಲ್ಲದೆ ಕೊಚ್ಚಿ ಗುಂಡಿಯಾಗುತ್ತಿದೆ. ಮನೆ ಮುಂದೆ ನಿಲ್ಲುವ ನೀರಿನಿಂದ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಡುತ್ತಿದ್ದು, ಅನೈರ್ಮಲ್ಯ ವಾತಾವರಣ ನಿರ್ಮಾಣವಾಗುತ್ತಿದೆ. ಚರಂಡಿ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಮನೆಯ ಕಲುಷಿತ ನೀರು, ಮಳೆ ನೀರು ಮನೆಗಳ ಮುಂದೆ ನಿಲ್ಲುತ್ತಿದೆ. ಇಷ್ಟು ಸಾಲದು ಎಂಬಂತೆ ನೀರು ನಿಂತ ಜಾಗದಲ್ಲಿನ ಗಿಡಗಂಟಿಗಳು ಬೆಳೆದು ನಿಂತಿದ್ದು ಅಶುಚಿತ್ವ ಮನೆ ಮಾಡಿದೆ.
ಎಲ್ಲ ಕಡೆ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದ್ದು, ಡೆಂೆ, ಚಿಕೂನ್ ಗುನ್ಯಾದಂತಹ ಮಾರಕ ರೋಗಗಳಿಗೆ ತುತ್ತಾಗಿ ಪ್ರಾಣಹಾನಿ ಸಂಭವಿಸುತ್ತಿದೆ. ಹೀಗಿರುವಾಗ ಗ್ರಾಮದಲ್ಲಿ ಇಷ್ಟೆಲ್ಲ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದ್ದರೂ ಯಾವೊಬ್ಬ ಅಧಿಕಾರಿಗಳೂ ಇತ್ತ ತಿರುಗಿ ನೋಡಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಮ್ಮ ಬಡಾವಣೆಯಲ್ಲಿ ಚರಂಡಿ ನಿರ್ಮಿಸುವಂತೆ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ಹಾಗೂ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ನಮ್ಮ ಮನವಿಗೆ ಸ್ಪಂದನೆ ನೀಡುತ್ತಿಲ್ಲ. ಇಲ್ಲಿ ಸೊಳ್ಳೆ, ಕ್ರಿಮಿಕೀಟಗಳ ಕಾಟ ಹೆಚ್ಚಾಗಿದೆ. ಈಗ ಮಳೆಗಾಲವಾಗಿದ್ದು ಮಲೇರಿಯಾ, ಡೆಂೆ ಹರಡುವ ಭೀತಿ ಇದೆ. ಈ ಸಮಯದಲ್ಲಾದರೂ ನಮ್ಮ ರಸ್ತೆಯನ್ನು ಶುಚಿಯಾಗಿಡಲು ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದೆ.ಪುಟ್ಟನಂಜಮ್ಮನಿವಾಸಿ ಇಲ್ಲಿನ ರಸ್ತೆಯು ಇತಿಹಾಸ ಪ್ರಸಿದ್ಧ ಚಾಮುಂಡೇಶ್ವರಿ ದೇಗುಲಕ್ಕೆ ಸಾಗುವ ರಸ್ತೆಯಾಗಿದ್ದು, ದಿನನಿತ್ಯ ಹಲವಾರು ವಾಹನಗಳು ಇಲ್ಲಿಂದ ಚಲಿಸುತ್ತದೆ. ಆದರೆ ಈ ರಸ್ತೆಯ ತುಂಬೆಲ್ಲ ಹಳ್ಳಕೊಳ್ಳಗಳು ಬಿದ್ದಿವೆ. ಮಣ್ಣಿನ ಕಚ್ಚಾರಸ್ತೆಯಾಗಿದ್ದು ಮಳೆ ಬಂದರೆ ವಾಹನ ಚಾಲನೆ ಕಷ್ಟವಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ವಹಿಸಿ ಇಲ್ಲಿನ ವಾಸಿಗಳ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸಬೇಕು.ಪ್ರೀತಿನಿವಾಸಿ ಕಂದಹಳ್ಳಿ ಗ್ರಾಮ ಕಂದಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಇದ್ದರಿಂದ ಚರಂಡಿ ಸಮಸ್ಯೆ ಎದುರಾಗಿದೆ. ಅವರು ಕಾಮಗಾರಿ ಪೂರ್ಣಗೊಳಿಸಿದರೆ ಬಡಾವಣೆಯ ಚರಂಡಿ ನೀರು ಸರಾಗವಾಗಿ ಹರಿದು ಹೋಗುತ್ತದೆ. ಗ್ರಾಮದ ಕಚ್ಚಾ ರಸ್ತೆ, ಚರಂಡಿ ದುರಸ್ತಿಗೆ ಸಂಬಂಧಪಟ್ಟಂತೆ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು.ಬಸವಣ್ಣಪಿಡಿಒ ದುಗ್ಗಹಟ್ಟಿ