Oplus_131072 
ಜಿಲ್ಲೆ

ಹಳ್ಳ ಹಿಡಿದ ‘ಕೂಸಿನ ಮನೆ’ ಯೋಜನೆ

ಕಿರಣ್ ಮಾದರಹಳ್ಳಿ

ಡಿ.ಪಿ.ಮಹೇಶ್ ಯಳಂದೂರು
ತಾಲೂಕಿನ ‘ಕೂಸಿನ ಮನೆ’ ಯೋಜನೆಯ ಉದ್ದೇಶ ಹಳ್ಳ ಹಿಡಿದಿದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ನೀಡದ ಪರಿಣಾಮ ಯೋಜನೆ ಕಾಟಾಚಾರಕ್ಕೆ ಎಂಬಂತಾಗಿದೆ.

ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ 7 ತಿಂಗಳಿಂದ 3 ವರ್ಷದೊಳಗಿನ ಮಗುವನ್ನು ಲಾಲನೆ-ಪಾಲನೆಗೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕೂಸಿನ ಮನೆ ಯೋಜನೆ ಜಾರಿಗೊಳಿಸಿತ್ತು. ತಾಲೂಕಿನಲ್ಲಿ ದುಗ್ಗಹಟ್ಟಿ, ಅಗರ, ಬಿಳಿಗಿರಿರಂಗನಬೆಟ್ಟ, ಗುಂಬಳ್ಳಿ, ಕೆಸ್ತೂರು, ಮದ್ದೂರು, ಯರಗಂಬಳ್ಳಿ ಸೇರಿ 7 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಕೂಸಿನ ಮನೆ’ ಪ್ರಾರಂಭ ಮಾಡಲಾಗಿತ್ತು. ಶಿಶುಗಳ ಆರೈಕೆಯನ್ನು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೂ ಮಾಡಬೇಕು. ಆದರೆ ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಹಾಗೂ ಇತರ ಕೂಲಿ ಕೆಲಸಕ್ಕೂ ಹೋಗದ ಮನೆಯಲ್ಲಿರುವ ಗೃಹಿಣಿಯರ ಮಕ್ಕಳನ್ನು ಕರೆದುಕೊಂಡು ಬರುವ ‘ಕೂಸಿನ ಮನೆ’ ಯೋಜನೆಯ ಸಿಬ್ಬಂದಿ ಅವರ ಫೋಟೋ ಹಾಕಿ ಅಂಕಿ-ಅಂಶವನ್ನು ಮೇಲಧಿಕಾರಿಗಳಿಗೆ ವರದಿ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನರೇಗಾ ಯೋಜನೆ ಕೂಲಿ ಕಾರ್ಮಿಕರ ಶಿಶುಗಳ ಪೋಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯದ ನಿರ್ದೇಶನದಂತೆ 2023 ರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ತಾಲೂಕಿನ 12 ಗ್ರಾಮ ಪಂಚಾಯಿತಿಗಳ ಪೈಕಿ ಮೊದಲ ಹಂತದಲ್ಲಿ ಸರ್ಕಾರಿ ಕಟ್ಟಡಗಳು ಲಭ್ಯತೆಗೆ ಅನುಗುಣವಾಗಿ 7 ಕಡೆ ‘ಕೂಸಿನ ಮನೆ’ ಕಾರ್ಯಾರಂಭಗೊಂಡಿದೆ. ಇನ್ನು ಮುಂದೆ ಗ್ರಾಮೀಣ ಪ್ರದೇಶದ ಮಹಿಳೆಯರು ‘ಕೂಸಿನ ಮನೆ’ಯಲ್ಲಿ ತಮ್ಮ ಮಕ್ಕಳನ್ನು ಬಿಟ್ಟು ನಿಶ್ವಿಂತೆಯಿಂದ ಕೆಲಸಕ್ಕೆ ತೆರಳಬಹುದು ಎಂಬ ಉದ್ದೇಶದಿಂದ ಪ್ರಾರಂಭವಾದ ಯೋಜನೆಯು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸದ ಪರಿಣಾಮ ಗ್ರಾಮೀಣ ಭಾಗದಲ್ಲಿ ಬೇಕಾಬಿಟ್ಟಿಯಾಗಿ ಅಂಕಿ-ಅಂಶಗಳನ್ನು ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಗ್ರಾಪಂ ಕೇಂದ್ರಕ್ಕೆ ಸಿಮೀತ
ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಕಚೇರಿಯ ಕೇಂದ್ರ ಸ್ಥಾನಗಳಲ್ಲಿ ಮಾತ್ರ ಕೂಸಿನ ಮನೆಯನ್ನು ಪ್ರಾರಂಭವಾಗಿದೆ. ಆದರೆ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ರಿಂದ 5 ಗ್ರಾಮಗಳು ಸೇರುತ್ತವೆ. ನರೇಗಾ ಯೋಜನೆಯಡಿ 15 ದಿನಗಳ ಕೂಲಿ ಕೆಲಸ ಮುಗಿದ ಮೇಲೆ ಬೇರೆ ಗ್ರಾಮಗಳಿಗೆ ಹೋಗಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಮಹಿಳೆಯರು ಕೂಲಿ ಕೆಲಸಕ್ಕೆ ಆಗಮಿಸಲು ಹಿಂದೇಟು ಹಾಕುತ್ತಾರೆ. ಜತೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಗ್ರಾಮಗಳು ಸೇರಿವುದರಿಂದ ಬೇರೆ ಬೇರೆ ಗ್ರಾಮಗಳಲ್ಲಿ ಕೂಲಿ ಕಾರ್ಮಿಕ ಮಕ್ಕಳು ಈ ಯೋಜನೆಯ ಸೇವೆಯಿಂದ ವಂಚಿತಗೊಳ್ಳುತ್ತಿದ್ದಾರೆ. ಆದ್ದರಿಂದ ಈ ಯೋಜನೆಯನ್ನು ಪ್ರತಿ ಗ್ರಾಮಗಳಲ್ಲಿ ‘ಕೂಸಿನ ಮನೆ’ಯನ್ನು ತೆರೆಯುವ ಮೂಲಕ ಹೊಸ ಯೋಜನೆ ಆರಂಭಿಸಬೇಕು ಅಥವಾ ಅಂಗನವಾಡಿ ಕೇಂದ್ರಗಳಿಗೆ ಇದನ್ನು ಸೇರಿಸಿ ಆ ಅಂಗನವಾಡಿ ಕೇಂದ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಇನ್ನ್ನಷ್ಟು ಅನುಕೂಲ ಸೌಲಭ್ಯಗಳನ್ನು ನೀಡಿ ಕೇಂದ್ರವನ್ನು ಅಭಿವೃದ್ಧಿಗೆ ಗಮನಹರಿಸಬೇಕಾಗಿದೆ.

ಸಿಬ್ಬಂದಿಯ ತರಬೇತಿ ಬಗ್ಗೆ ಖಚಿತವಿಲ್ಲ
ಕೂಸಿನ ಮನೆ ಯೋಜನೆಯು ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು. ಜತೆಗೆ ಆರೈಕೆದಾರರ ಅನುದಾನ, ಅವರಿಗೆ ಸರಿಯಾದ ತರಬೇತಿಯನ್ನು ನೀಡಲಾಗಿದೆಯೇ, ಇಲ್ಲವೇ ಎಂಬುದು ಖಚಿತವಿಲ್ಲ. ಆಹಾರ ಪಟ್ಟಿ ಸಿದ್ಧಪಡಿಸುವುದು, ಆದರ ನಿರ್ವಹಣೆ, ಚಟುವಟಿಕೆ ಕುರಿತಂತೆ ಸಭೆ ನಡೆಸುವುದು ಇವೆಲ್ಲಾ ಗ್ರಾಮ ಪಂಚಾಯಿತಿಗಳಿಗೆ ಆರ್ಥಿಕ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಹೆಚ್ಚಿನ ಹೊರೆಯ ಜತೆಗೆ ನಿರ್ವಹಿಸುವುದು ಕಷ್ಟ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಆದುದರಿಂದ ಮಗುವಿಗೆ ನರೇಗಾ ಯೋಜನೆಯಲ್ಲಿ ಜಾಬ್ ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕ ಮಹಿಳೆಯರ ಕೆಲಸಕ್ಕೆ ಬರುವುದು ತುಂಬ ಕಡಿಮೆ. ಆದರೂ ತಾಲೂಕಿನಲ್ಲಿ 7 ಕೇಂದ್ರದಲ್ಲೂ ಒಟ್ಟು 42 ಮಕ್ಕಳು ಆಗಮಿಸುತ್ತಾರೆ ಎಂದು ಹೇಳುತ್ತಿದ್ದಾರೆ. ಈ ಯೋಜನೆಯ ಬಗ್ಗೆ ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಿ ಅರ್ಹ ಕೂಲಿ ಕಾರ್ಮಿಕರ ಮಕ್ಕಳಿಗೆ ‘ಕೂಸಿನ ಮನೆ’ ಯೋಜನೆ ಅನುಕೂಲವಾಗುವಂತೆ ಮಾಡಬೇಕಿದೆ.

ಜಿಲ್ಲೆಯಲ್ಲಿ 90 ‘ಕೂಸಿನ ಮನೆ’ಯನ್ನು ತೆರೆಯಲಾಗಿದ್ದು, ‘ಕೂಸಿನ ಮನೆ’ ಯೋಜನೆಯು ಗ್ರಾಮ ಪಂಚಾಯಿತಿ ಕೇಂದ್ರಕ್ಕೆ ಮಾತ್ರ ಸಿಮೀತವಾಗಿದೆ. ಇದನ್ನು ಪ್ರತಿ ಗ್ರಾಮಗಳಲ್ಲೂ ತೆರೆಯಬೇಕು ಎಂಬ ಬೇಡಿಕೆ ಸಾರ್ವಜನಿಕರಿಂದ ಕೇಳಿಬರುತ್ತಿದ್ದು, ಜತೆಗೆ ಕೇಂದ್ರದಲ್ಲಿ ಕೂಲಿ ಕಾರ್ಮಿಕರ ಮಕ್ಕಳ ಬದಲು ಇತರರ ಮಕ್ಕಳ ಆರೈಕೆ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಈ ಬಗ್ಗೆ ನಾನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುತ್ತೇನೆ. ಜತೆಗೆ ಪಂಚಾಯಿತಿ ವ್ಯಾಪ್ತಿಯ ನೋಡಲ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸುವಂತೆ ಸೂಚಿಸುತ್ತೇನೆ.ಆನಂದ್ ಪ್ರಕಾಶ ಮೀನಾ ಜಿ.ಪಂ. ಸಿಇಒ, ಚಾಮರಾಜನಗರ