ಜಿಲ್ಲೆ

ರೈತರ ಸ್ವಂತ ಖರ್ಚಿನಲ್ಲಿ ಕಾಲುವೆ ಸ್ವಚ್ಛತೆ

ಕಿರಣ್ ಮಾದರಹಳ್ಳಿ

ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನ ಮುಖ್ಯ ನಾಲೆಗಳು ಹಾಗೂ ಉಪ ಕಾಲುವೆಗಳಲ್ಲಿ ಗಿಡಗಂಟಿಗಳು ಬೆಳೆದು, ಹೂಳು ತುಂಬಿಕೊಂಡಿದ್ದು, ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಸ್ವಚ್ಛಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಮೀನಿಗೆ ನೀರು ಸರಾಗವಾಗಿ ಹರಿಯದೆ ರೈತರು ಬೆಳೆ ಬೆಳೆಯಲು ಕಷ್ಟವಾಗುತ್ತಿದೆ. ಕಳೆದ ಬಾರಿ ಸುರಿದ ಮಳೆಗೆ ಕಾಲುವೆಯಲ್ಲಿ ಮೆಕ್ಕಲು ಮಣ್ಣು, ಕಸಕಡ್ಡಿ ತುಂಬಿ ಮುಚ್ಚಿಕೊಂಡಿದೆ. ಈ ಕುರಿತು ಕೊಳ್ಳೇಗಾಲ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

4 ವಿಭಾಗಗಳಿಗೆ ಹಂಚಿಕೆ: ಯಳಂದೂರು ತಾಲೂಕಿನಲ್ಲಿ ಹಾದು ಹೋಗಿರುವ ಕಬಿನಿ ನಾಲೆ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ನಾಲ್ಕು ವಿಭಾಗಗಳಿಗೆ ಹಂಚಿಕೆಯಾಗಿದೆ. ಚಾಮರಾಜನಗರ, ಸಂತೇಮರಹಳ್ಳಿ ಹಾಗೂ ಕೊಳ್ಳೇಗಾಲದ ಎರಡು ವಿಭಾಗಗಳಿಗೆ ಹಂಚಿ ಹೋಗಿರುವ ಹಿನ್ನೆಲೆಯಲ್ಲಿ ಸಮಪರ್ಕವಾಗಿ ಕೆಲಸಗಳು ನಡೆಯುವುದಿಲ್ಲ. ಸಮಸ್ಯೆ ಕುರಿತು ಅಧಿಕಾರಿಗಳಿಗೆ ರೈತರು ದೂರು ನೀಡಿದರೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ನುಣುಚಿಕೊಳ್ಳುತ್ತಾರೆ. ಅಲ್ಲದೆ, ಯಳಂದೂರು ಪಟ್ಟಣದಲ್ಲಿ ನಿಗಮದ ಕಚೇರಿಯೇ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ಕುರಿತು ಹಲವು ವರ್ಷಗಳಿಂದ ಇಲ್ಲಿನ ರೈತರು ಹೋರಾಟ ಮಾಡುತ್ತ ಬಂದಿದ್ದರೂ ಫಲಪ್ರದವಾಗಿಲ್ಲ. ಸಮಸ್ಯೆಗಳನ್ನು ಹೇಳಿಕೊಳ್ಳಲು ದೂರದ ಚಾಮರಾಜನಗರ, ಕೊಳ್ಳೇಗಾಲ, ಸಂತೆಮರಹಳ್ಳಿಯಲ್ಲಿರುವ ಕಚೇರಿಗಳಿಗೆ ತೆರಳಬೇಕಾಗಿದೆ.

42ನೇ ವಿತರಣಾ ನಾಲೆಯಿಂದ ಉಪಕಾಲುವೆಯಲ್ಲಿ ಹೂಳನ್ನು ತೆಗೆಯುವಂತೆ ಕೊಳ್ಳೇಗಾಲ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಅಧಿಕಾರಿಗಳು ತಲೆಕೆಡೆಸಿಕೊಂಡಿಲ್ಲ. ಈಗ ಕಾಲುವೆಯಲ್ಲಿ ನೀರು ಹರಿಸುವ ಸಮಯವಾಗಿದ್ದು, ಜಮೀನಿಗೆ ನೀರು ಬರುವಂತೆ ಮಾಡಲು ಈ ಭಾಗದ ರೈತರೇ ಹಣ ಸಂಗ್ರಹಿಸಿ ಯಂತ್ರದ ಮೂಲಕ ಹೂಳು ತೆಗೆಸುತ್ತಿದ್ದೇವೆ.-ಜೆ. ಶ್ರೀನಿವಾಸ್, ಯಳಂದೂರು ರೈತ ನಮ್ಮ ವ್ಯಾಪ್ತಿಯ ಪ್ರಮುಖ ನಾಲೆಗಳಲ್ಲಿ ಹೂಳೆತ್ತಲು ಕ್ರಮ ವಹಿಸಲಾಗಿದೆ. ಈಗಾಗಲೇ ಹಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ. ನಮಗೆ ಅನುದಾನದ ಕೊರತೆಯೂ ಇರುವುದರಿಂದ ಕಾಮಗಾರಿ ವಿಳಂಬವಾಗಿದೆ. ಯಳಂದೂರು ವ್ಯಾಪ್ತಿಯಲ್ಲಿ ಕಾಲುವೆ ಹೂಳೆತ್ತುವ ಸಂಬಂಧ ಪರಿಶೀಲಿಸಿ ಕ್ರಮ ವಹಿಸಲಾಗುವುದು.-ಸತೀಶ್, ಜೂನಿಯರ್ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ, ಕೊಳ್ಳೇಗಾಲ