ಜಿಲ್ಲೆ

ಧ್ರುವನಾರಾಯಣ ಮಾದರಿ ರಾಜಕಾರಣಿ

ಕಿರಣ್ ಮಾದರಹಳ್ಳಿ

ಯಳಂದೂರು: ದಿ.ಆರ್. ಧ್ರುವನಾರಾಯಣ ಮಾದರಿ ರಾಜಕಾರಣಿಯಾಗಿದ್ದು ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ ಮಾದರಿ ರಾಜಕಾರಣಿ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಬಣ್ಣಿಸಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಧ್ರುವನಾರಾಯಣ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾನು, ಧ್ರುವನಾರಾಯಣ ಒಂದೇ ವರ್ಷದಲ್ಲಿ ಹುಟ್ಟಿದವರು. ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ಒಂದು ಮತದಿಂದ ನನ್ನನ್ನು ಸೋಲಿಸಿ ಆ ಮೂಲಕ ಒಂದು ಮತದ ಮೌಲ್ಯವನ್ನು ಇಡೀ ದೇಶಕ್ಕೆ ಸಾರಿದ ಹೆಗ್ಗಳಿಗೆ ಅವರಿಗೆ ಸಲ್ಲುತ್ತದೆ ಎಂದರು.

ಪರಸ್ಪರ ಎದುರಾಳಿಗಳಾಗಿದ್ದ ನಾವು ನಂತರ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೆವು. ಈ ಸಂದರ್ಭದಲ್ಲಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ನಂತರ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದ ವಿವಿಧ ಮೂಲೆಗಳಲ್ಲಿ ಸಂಚರಿಸಿ ಕೊಡಗು, ಮಂಗಳೂರು, ಚಿಕ್ಕಮಗಳೂರಿನಲ್ಲೂ ಕಾಂಗ್ರೆಸ್ ಪಕ್ಷದ ಜಯಕ್ಕೆ ಕಾರಣರಾಗಿದ್ದರು. ಇವರು ದಣಿವರಿಯದ ರಾಜಕಾರಣಿಯಾಗಿದ್ದರು. ಪಕ್ಷ ಸಂಘಟನೆ ಹಾಗೂ ತಮ್ಮ ಕ್ಷೇತ್ರದ ಅಭಿವೃದ್ಧಿ ಕಡೆಗೆ ಸದಾ ಚಿತ್ತವನ್ನು ನೆಟ್ಟಿದ್ದರು. ಇದೀಗ ಅವರ ಪುತ್ರ ದರ್ಶನ್ ನಂಜನಗೂಡು ಕ್ಷೇತ್ರದಲ್ಲಿ ಗೆದ್ದು ತಂದೆಯಂತೆ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಧ್ರುವನಾರಾಯಣ ನೆನಪಿನಲ್ಲಿ ಮಂಗಳವಾರ ಹೆಗ್ಗವಾಡಿ ಗ್ರಾಮದಲ್ಲಿ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಹಾಗಾಗಿ, ಸಾರ್ವಜನಿಕರೆಲ್ಲರೂ ಭಾಗವಹಿಸಿ ಎಂದು ಕರೆನೀಡಿದರು.

ಮಾಜಿ ಶಾಸಕ ಎಸ್. ಜಯಣ್ಣ ಮಾತನಾಡಿ, ಧ್ರುವನಾರಾಯಣ ಕಾರ್ಯಕರ್ತರರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಎರಡು ಬಾರಿ ಶಾಸಕರು, ಎರಡು ಬಾರಿ ಸಂಸದರಾಗಿ ಜನಸೇವೆ ಮಾಡಿದ್ದರು ಎಂದು ಸ್ಮರಿಸಿದರು. ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಕೇತಮ್ಮ, ಅಕ್ಮಲ್ ಪಾಷ, ವಡಗೆರೆದಾಸ್, ಮಾಂಬಳ್ಳಿ ನಂಜುಂಡಸ್ವಾಮಿ, ಸದಾಶಿವಮೂರ್ತಿ, ಪ್ರಭುಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಚಂದ್ರು, ತೋಟೇಶ್ ಮಾತನಾಡಿದರು. ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ ಕೊಳ್ಳೇಗಾಲ ನಗರಸಭಾ ಸದಸ್ಯ ಬಸ್ತೀಪುರ ಶಾಂತರಾಜು, ಪ್ರಶಾಂತ್, ಸುರೇಶ್, ಪುಟ್ಟಸ್ವಾಮಿ, ಮಲ್ಲು, ಸುರೇಶ್, ಜಯರಾಜು, ಭಾಗ್ಯಮ್ಮ, ದೇವಿಕಾ, ಜಯರಾಜು, ಮುನವ್ವರ್ ಬೇಗ್ ಸೇರಿದಂತೆ ಅನೇಕರು ಇದ್ದರು.