ಜಿಲ್ಲೆ

ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರ ಪ್ರತಿಭಟನೆ

ಕಿರಣ್ ಮಾದರಹಳ್ಳಿ

ಯಳಂದೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಾಡಮೇಗಲಮ್ಮ ದೇಗುಲದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎತ್ತಿನಗಾಡಿಗಳ ಮೂಲಕ ಮೆರವಣಿಗೆ ತೆರಳಿ ಎಸ್‌ಬಿಐ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿದರು. ನಂತರ ತಹಸೀಲ್ದಾರ್ ಕಚೇರಿ ಎದುರು ಜಮಾಯಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ತಾಲೂಕಿನಲ್ಲಿ ರೈತರು ಮಳೆ ಇಲ್ಲದೆ ಪರದಾಡುತ್ತಿದ್ದಾರೆ. ಜಿಲ್ಲೆ ಹಾಗೂ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. 25 ವರ್ಷಗಳಿಂದ ಹಲವು ಹಳ್ಳಿಗಳಲ್ಲಿ ಕರ ನಿರಾಕರಣೆ ಚಳವಳಿ ನಡೆಯುತ್ತಿದ್ದು ಹಿಂದಿನ ಹಳೆಯ ವಿದ್ಯುತ್ ಬಾಕಿಯನ್ನು ಸರ್ಕಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಕಬಿನಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿ ಕರೆ ಕಟ್ಟೆಗಳನ್ನು ತುಂಬಿಸಬೇಕು. ಕಾಡಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಬೆಳೆ ಹಾನಿಯಾಗುತ್ತಿದ್ದು ಪರಿಹಾರ ನೀಡಬೇಕು. 2023-24 ನೇ ಸಾಲಿನ ಕಬ್ಬಿನ ಕಟಾವು ಹಾಗೂ ಬೆಲೆ ಸಂಬಂಧಿಸಿದ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆಯಬೇಕು. ಬಿಳಿಗಿರಿರಂಗನ ಬೆಟ್ಟದ ಪೋಡುಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು. ಆಮೆಕೆರೆಯ ರೈತರಿಗೆ ಅರಣ್ಯ ಇಲಾಖೆ ಚಂಗಡಿ ಮಾದರಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕಬಿನಿ ಇಲಾಖೆಯ ಭೂಸ್ವಾಧೀನ ಅಧಿಕಾರಿಗಳ ಕಚೇರಿ ಮೈಸೂರಿನಲ್ಲಿದ್ದು ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು. ಕಬಿನಿ ನಾಲೆಗೆ ಸಂಬಂಧಪಟ್ಟಂತೆ ರುವ ಸಮಸ್ಯೆಗಳನ್ನು ಪರಿಹರಿಸಬೇಕು. ಪರಿಹಾರ ವಿತರಣೆ ಸಂಬಂಧ ಅರಣ್ಯ ಇಲಾಖೆ ಸಿಸಿಎಫ್, ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು. ಶುಕ್ರವಾರವೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಹೇಳಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಸ್ವಾಮಿ, ಕಾರ್ಯದರ್ಶಿ ಶಿವಪ್ರಸಾದ್, ಹಸಿರು ಸೇನೆ ಸಂಚಾಲಕ ವೃಷಭೇಂದ್ರ, ಅಂಬಳೆ ಶಿವಕುಮಾರ್, ಗೌಡಹಳ್ಳಿ ಸೋಮಣ್ಣ, ರಾಜಣ್ಣ ಹಾಜರಿದ್ದರು.