ಯಳಂದೂರು ಪಪಂ ಕಟ್ಟಡ 
ಜಿಲ್ಲೆ

ಕಾಂಗ್ರೆಸ್‌ಗೆ ಯಳಂದೂರು ಪಪಂ ಅಧಿಕಾರ ನಿಶ್ಚಿತ

ಯಳಂದೂರು: ಇಲ್ಲಿನ ಪಟ್ಟಣ ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸೆ.4ಕ್ಕೆ ನಿಗದಿಯಾಗಿದ್ದು, ಎರಡೂ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವುದು ಬಹುತೇಕ ಖಚಿತವಾಗಿದೆ.


11 ಸದಸ್ಯರಿದ್ದ ಪಂಚಾಯಿತಿಯಲ್ಲಿ ಒಬ್ಬ ಕಾಂಗ್ರೆಸ್ ಸದಸ್ಯರು ಮೃತಪಟ್ಟ ಹಿನ್ನೆಲೆಯಲ್ಲಿ ಈಗ 10 ಸ್ಥಾನಕ್ಕೆ ಕುಸಿದಿದೆ. ಇದರಲ್ಲಿ 9 ಮಂದಿ ಕಾಂಗ್ರೆಸ್ ಹಾಗೂ ಒಬ್ಬರು ಮಾತ್ರ ಬಿಜೆಪಿ ಸದಸ್ಯರಿದ್ದಾರೆ. ಕಳೆದ ಬಾರಿ ಇದ್ದ ಮೀಸಲಾತಿಯೇ ಈ ಬಾರಿಯೂ ಮುಂದುವರಿದಿದೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾಗಿರುವುದರಿಂದ ಇಬ್ಬರೂ ಮಹಿಳೆಯರು ಮತ್ತೆ ಅಧಿಕಾರದ ಗದ್ದುಗೆ ಏರಲಿದ್ದಾರೆ.
ಅಧ್ಯಕ್ಷೆಯಾಗಿ ಲಕ್ಷ್ಮೀ ಮಲ್ಲು ಆಯ್ಕೆ ಖಚಿತ: ಕಳೆದ ಅವಧಿಯಲ್ಲಿ ಪೂರ್ಣ ಅವಧಿಗೆ ಉಪಾಧ್ಯಕ್ಷೆ ಪಟ್ಟ ಅಲಂಕರಿಸಿದ್ದ 10ನೇ ವಾರ್ಡಿನ ಲಕ್ಷ್ಮೀ ಮಲ್ಲು ಈ ಬಾರಿ ಅಧ್ಯಕ್ಷ ಸ್ಥಾನ ಏರುವುದು ಬಹುತೇಕ ಖಚಿತವಾಗಿದೆ. ಇತರ ಸದಸ್ಯರ ಬೆಂಬಲ ಹಾಗೂ ಶಾಸಕರು, ಸ್ವಪಕ್ಷ ಸದಸ್ಯರ ಬೆಂಬಲ ಇವರಿಗಿದ್ದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದು ಬಹುತೇಕ ಖಚಿತವಾಗಿದೆ.


ಉಪಾಧ್ಯಕ್ಷೆಯಾಗಿ ಶಾಂತಮ್ಮ: ಕಳೆದ ಅವಧಿಯಲ್ಲಿ ಪ್ರಥಮವಾಗಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ 11ನೇ ವಾರ್ಡಿನ ಶಾಂತಮ್ಮ ನಿಂಗರಾಜು ಈ ಬಾರಿ ಉಪಾಧ್ಯಕ್ಷೆಯಾಗಿ ಅಧಿಕಾರ ಹಿಡಿಯುವುದು ಖಚಿತವಾಗಿದೆ. ಪಕ್ಷದ ಇತರ ಸದಸ್ಯರು, ವರಿಷ್ಠರೊಂದಿಗೆ ಮಾತುಕತೆ ನಡೆಸಲಾಗಿದೆ.
ಪ್ರವಾಸ ಭಾಗ್ಯ: ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕೆಲ ಸದಸ್ಯರು ಪ್ರವಾಸ ಕೈಗೊಂಡಿದ್ದಾರೆ. ಪಂಚಾಯಿತಿ ಈ ಬಾರಿಯೂ ಎರಡೂ ಸ್ಥಾನಗಳು ಮಹಿಳೆಯರಿಗೇ ಮೀಸಲಾಗಿದೆ. ಪಂಚಾಯಿತಿಯಲ್ಲಿ ಒಟ್ಟು 5 ಮಂದಿ ಮಹಿಳೆಯರೇ ಇದ್ದು ಇದರಲ್ಲಿ ನಾಲ್ವರು ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ಹಾಗಾಗಿ ಮಹಿಳೆಯರ ಆಯ್ಕೆ ಅನಿವಾರ್ಯವಾಗಿದೆ. ಪ್ರವಾಸದಲ್ಲಿರುವ ಸದಸ್ಯರು ಬುಧವಾರ ನಡೆಯಲಿರುವ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಪಟ್ಟಣ ಪಂಚಾಯಿತಿಯ ಕಚೇರಿಯಲ್ಲಿ ಸಭಾಂಗಣದಲ್ಲಿ ಬುಧವಾ ಬೆಳಹ್ಹೆ 10.30ರಿಂದ ಆರಂಭಗೊಳ್ಳಲಿದ್ದು, ಮಧ್ಯಾಹ್ನ 1 ಗಂಟೆಗೆ ಮುಗಿಯಲಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣಾಧಿಕಾರಿಯಾಗಿ ಪಂಚಾಯಿತಿಯ ಅಡಳಿತಾಧಿಕಾರಿಯೂ ಆಗಿರುವ ತಹಸೀಲ್ದಾರ್ ಜಯಪ್ರಕಾಶ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಮಾಹಿತಿ ನೀಡಿದ್ದಾರೆ.