ಯಲಬುರ್ಗಾ: ಗ್ರಂಥಪಾಲಕರು ಗ್ರಾಮೀಣ ಭಾಗದ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದರ ಜತೆಗೆ ಗ್ರಂಥಾಲಯಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಬೇಕು ಎಂದು ತಾಪಂ ಇಒ ಸಂತೋಷ್ ಪಾಟೀಲ್ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಜಿಪಂ, ಯುನಿಸೆಫ್-ಕಲಿಕೆ ಟಾಟಾ ಟ್ರಸ್ಟ್, ಶಿಕ್ಷಣ ಫೌಂಡೇಷನ್ ಸಹಭಾಗಿತ್ವದಲ್ಲಿ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರಿಗೆ ಆಯೋಜಿಸಿದ್ದ ಮಕ್ಕಳ ಸ್ನೇಹಿ ಗ್ರಂಥಾಲಯ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜಿಪಂ ಸಿಇಒ ಮಾರ್ಗದರ್ಶನದೊಂದಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುವುದು. ಗ್ರಾಮೀಣ ಪ್ರದೇಶದ ಗ್ರಂಥಾಲಯಗಳಲ್ಲಿ ತಾಪಂ ಮೂಲ ಸೌಕರ್ಯ ಕಲ್ಪಿಸಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಕಲಿಕೆ-ಟಾಟಾ ಸಂಸ್ಥೆಯ ಕಲ್ಲಪ್ಪ ತಳವಾರ್, ಅಲ್ಲಾವುದ್ದೀನ್, ಶಿಕ್ಷಣ ಫೌಂಡೇಷನ್‌ನ ಬಸವರಾಜ, ಸಂಪನ್ಮೂಲ ವ್ಯಕ್ತಿ ಭೀಮಣ್ಣ ಹವಳಿ ಮಾತನಾಡಿದರು. ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ 30 ಗ್ರಂಥಪಾಲಕರು ಪಾಲ್ಗೊಂಡಿದ್ದರು. ಚಿತ್ರಕಲೆ, ಹಲವು ಕ್ರಿಯಾತ್ಮಕ ಚಟುವಟಿಕೆ ಮಾಡಿಸಲಾಯಿತು. ತಾಪಂ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ ಪರಿಶೀಲಿಸಿದರು.