ಯಲಬುರ್ಗಾ: ವಿವಿಧ ಇಲಾಖೆಗಳಿಗೆ ಸರ್ಕಾರದಿಂದ ಮಂಜೂರಾಗುವ ಎಸ್ಸಿಪಿ, ಟಿಎಸ್ಪಿ ಯೋಜನೆ ಅನುದಾನ ಸಮರ್ಪಕವಾಗಿ ಬಳಸಬೇಕು. ಯಾರೂ ಹಿಂತಿರುಗಿಸಬಾರದು ಎಂದು ಅಧಿಕಾರಿಗಳಿಗೆ ತಾಪಂ ಇಒ ಸಂತೋಷ ಪಾಟೀಲ್ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್ಸಿಪಿ, ಟಿಎಸ್ಪಿ ಯೋಜನೆ ಮಾರ್ಗಸೂಚಿ ಬದಲಾಗಿದ್ದು, ಸಮರ್ಪಕವಾಗಿ ಸೌಲಭ್ಯ ತಲುಪಿಸಲು ಅನುದಾನ ಬಳಕೆಯಾಗಲಿ. ಎಸ್ಸಿ, ಎಸ್ಟಿ ವರ್ಗದ ಕಲ್ಯಾಣಕ್ಕಾಗಿ ಜಾರಿಯಾದ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಫಲಾನುಭವಿಗಳ ಹಿತ ಕಾಪಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಬಾಲಕಿಯರ ವಸತಿ ನಿಲಯದಲ್ಲಿ ಶೌಚಗೃಹ ಸಮಸ್ಯೆ ಇದ್ದು, ಪಪಂನಿಂದ ತಾತ್ಕಾಲಿಕ ಮೊಬೈಲ್ ಟಾಯ್ಲೆಟ್ ನಿರ್ಮಿಸಬೇಕೆಂದು ಮುಖ್ಯಾಧಿಕಾರಿ ನಾಗೇಶಗೆ ನಿರ್ದೇಶಿಸಿದರು. ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ನಾಗೇಶ ಪ್ರತಿಕ್ರಿಯಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಶಿಧರ ಸಕ್ರಿ ಮಾತನಾಡಿ, ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಮಾಡಿದ ಕಾಮಗಾರಿ ವೆಚ್ಚದ ಮಾಹಿತಿ ಹಾಗೂ ಫಲಾನುಭವಿಗಳ ಪಟ್ಟಿಯನ್ನು ಇಲಾಖೆಗೆ ಒದಗಿಸಬೇಕು. ಅನುದಾನ ವಾಪಸ್ ನೀಡದೆ ಪರಿಶಿಷ್ಟರ ಕಲ್ಯಾಣಕ್ಕಾಗಿ ಅಧಿಕಾರಿಗಳು ಶ್ರಮಿಸಬೇಕು ಎಂದರು.
ಸಭೆಯಲ್ಲಿ ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಇಲಾಖೆಗಳ ಪ್ರಗತಿ ವರದಿ ಮಂಡಿಸಿದರು. ಅಧಿಕಾರಿಗಳಾದ ನಿಂಗನಗೌಡ ಪಾಟೀಲ್, ಬೆಟ್ಟದಪ್ಪ ಮಾಳೆಕೊಪ್ಪ, ಶ್ರೀಧರ ತಳವಾರ್, ರಮೇಶ ಚಿಣಗಿ, ವೀರಭದ್ರಪ್ಪ, ಪ್ರೇಮಾ.ಎಚ್.ಡಿ., ಮಾಧವಿ ವೈದ್ಯ, ಅಂದಪ್ಪ ಕುರಿ ಇತರರಿದ್ದರು.