ಯಲಬುರ್ಗಾದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಮಾತನಾಡಿದರು. ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್, ತಾಪಂ ಇಒ ಸಂತೋಷ ಪಾಟೀಲ್ ಇದ್ದರು. 
ಜಿಲ್ಲೆ

ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಶುದ್ಧ ಕುಡಿಯುವ ನೀರೊದಗಿಸಿ

Gangavati - Mohan Kumar H R

ಯಲಬುರ್ಗಾ: ಅಂಗನವಾಡಿ ಕೇಂದ್ರ ಹಾಗೂ ಶಾಲಾ ಕಾಲೇಜುಗಳಿಗೆ ಸ್ಥಳೀಯ ಗ್ರಾಪಂನಿಂದ ಶುದ್ಧ ಕುಡಿಯುವ ನೀರೊದಗಿಸಬೇಕು. ಯಾರೂ ಬೇಜವಾಬ್ದಾರಿ ತೋರಬಾರದು. ನಿರ್ಲಕ್ಷಿಸಿದರೆ ಕ್ರಮ ನಿಶ್ಚಿತ ಎಂದು ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಎಚ್ಚರಿಸಿದರು.

ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರು ಸಮಸ್ಯೆ ನೀಗಿಸಲು ಸರ್ಕಾರ ಕ್ಷೇತ್ರಕ್ಕೆ 50 ಲಕ್ಷ ರೂ. ಅನುದಾನ ನೀಡಿದ್ದು, ಸಮರ್ಪಕ ಬಳಕೆ ಮಾಡಿಕೊಂಡು ಅವಶ್ಯವಿರುವ ಕಡೆ ನೀರಿನ ಸಮಸ್ಯೆ ಸರಿದೂಗಿಸಬೇಕು ಎಂದರು.

ಗ್ರಾಪಂ ಅನುದಾನವನ್ನು ಕುಡಿಯುವ ನೀರಿಗಾಗಿ ಖರ್ಚು ಮಾಡಬೇಕು. ಮುಖ್ಯವಾಗಿ ಶಾಲಾ ಮಕ್ಕಳಿಗೆ ನೀರು ಪೂರೈಸುವ ಜತೆಗೆ ಮೂಲಸೌಕರ್ಯ ಕಲ್ಪಿಸಬೇಕು. ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡರೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಬೇಕು ಎಂದು ಆರ್‌ಡಬ್ಲುಎಸ್ ಎಇಇ ರಿಜ್ವಾನಾ ಬೇಗಂಗೆ ಸೂಚಿಸಿದರು.

ಶಿಥಿಲಗೊಂಡ ಶಾಲಾ ಕಟ್ಟಡಗಳ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಬೇಕು. ವಸತಿ ನಿಲಯ ಹಾಗೂ ಶಾಲೆಗಳಲ್ಲಿ ಕೈತೋಟ ನಿರ್ಮಿಸಲು ಮುಂದಾಗಬೇಕು ಎಂದು ಪಿಡಿಒ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ನಿರ್ದೇಶಿಸಿದರು.

ಎಸ್‌ಸಿಪಿ, ಟಿಎಸ್‌ಪಿ ಸಭೆ ನಡೆಸಿ: ವರ್ಷದಲ್ಲಿ ಎರಡು ಬಾರಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳ ಕುರಿತು ತಾಲೂಕು ಮಟ್ಟದ ಸಭೆ ನಡೆಸಬೇಕು. ಇದುವರೆಗೆ ಕೇವಲ ಒಂದೇ ಸಭೆ ನಡೆದಿದೆ. ಬಾಕಿ ಉಳಿದ ಸಭೆ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿ.ಕೆ.ಬಡಿಗೇರ್‌ಗೆ ಉಪಕಾರ್ಯದರ್ಶಿ ಸೂಚಿಸಿದರು.

ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು. ಸಭೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ನಾಗಪ್ಪ ಸಜ್ಜನ್, ತಾಪಂ ಇಒ ಸಂತೋಷ ಪಾಟೀಲ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.