ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದ ರೈತ ಸೈಕಲ್ ವೀಡರ್ ಸಾಧನದಿಂದ ಎಡೆಕುಂಟೆ ಒಡೆಯುತ್ತಿರುವುದು.  
ಜಿಲ್ಲೆ

ಸಣ್ಣ ರೈತರಿಗೆ ವರದಾನವಾದ ಸೈಕಲ್ ವೀಡರ್

ಶಶಿಧರ ಎಲ್

ಯಲಬುರ್ಗಾ: ಹೊಲದಲ್ಲಿ ಕಳೆ ತೆಗೆಯುವ ಸೈಕಲ್ ವೀಡರ್‌ಗಳಿಗೆ ಪ್ರಸ್ತುತ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಏಕೆಂದರೆ ಕೈಗೆಟಕುವ ದರದಲ್ಲಿದ್ದು, ರೈತರಿಗೆ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಅದರಲ್ಲೂ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸೈಕಲ್ ವೀಡರ್‌ಗಳು ವರದಾನವಾಗಿವೆ.

ಕೃಷಿ ಇಲಾಖೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಸಣ್ಣ ರೈತರಿಗೆ ಕಳೆ ತೆಗೆಯಲು ಸಹಕಾರಿಯಾಗಲೆಂದು ಸೈಕಲ್ ವೀಡರ್ ಸಾಧನ ನೀಡುತ್ತಿದೆ. ಇದರ ಮೂಲ ಬೆಲೆ 2,000 ರೂ. ಇದ್ದು, ರೈತರಿಂದ 1,000 ರೂ. ವಂತಿಗೆ ಪಡೆಯಲಾಗುತ್ತದೆ. ಶೇ.50 ರಿಯಾಯಿತಿ ದರದಲ್ಲಿ ಸಿಗುವುದರಿಂದ ಸಾಧನಕ್ಕೆ ಬಹುಬೇಡಿಕೆ ಬಂದಿದೆ.

ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ 2022-23ನೇ ಸಾಲಿನಲ್ಲಿ ಬೇಡಿಕೆಯಷ್ಟು ಸೈಕಲ್ ವೀಡರ್ ದಾಸ್ತಾನು ಮಾಡಲಾಗಿತ್ತು. ಅದರಂತೆ ಆಯಾ ಹೋಬಳಿ ಕೇಂದ್ರಗಳಿಂದ ರೈತರು ಶೇ.85 ಸದುಪಯೋಗ ಪಡೆದುಕೊಂಡಿದ್ದಾರೆ.

ಇಂದಿನ ದುಬಾರಿ ದಿನಗಳಲ್ಲಿ ಸಣ್ಣ ರೈತರು ಎತ್ತುಗಳನ್ನು ಸಾಕಣೆ ಮಾಡುವುದು ಕಷ್ಟದ ಕೆಲಸ. ಅಲ್ಲದೆ, ದಿನೇದಿನೆ ಕೂಲಿ ದರ ಹೆಚ್ಚಾಗುತ್ತಲೇ ಇದೆ. ಮಳೆಗಾಲದಲ್ಲಿ ಬೆಳೆಯಲ್ಲಿನ ಕಳೆಯ ನಿರ್ವಹಣೆ ಸವಾಲಿನ ಕೆಲಸ. ಇದಕ್ಕೆ ರೈತರು ಸುಲಭದ ಮಾರ್ಗ ಕಂಡುಕೊಳ್ಳಲು ಸೈಕಲ್ ವೀಡರ್ ಮೊರೆ ಹೋಗುತ್ತಿದ್ದಾರೆ. ಸೈಕಲ್ ಎಡೆಕುಂಟೆಯಿಂದ ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ, ಹೆಸರು, ಹತ್ತಿ, ಬೀಜೋತ್ಪಾದನೆ ಬೆಳೆ ಸೇರಿ ಇನ್ನಿತರ ಬೆಳೆಗಳಲ್ಲಿ ಕಳೆ ತೆಗೆಯಲು ಸಹಾಯವಾಗುತ್ತದೆ. ಇದರಿಂದ ಸಮಯ, ಹಣ ಮತ್ತು ಶ್ರಮ ಉಳಿತಾಯವಾಗುತ್ತಿದೆ.

ಸಣ್ಣ ರೈತರಿಂದ ಸೈಕಲ್ ವೀಡರ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಕಡಿಮೆ ಖರ್ಚಿನಲ್ಲಿ ಕಳೆ ತೆಗೆಯಲು ಅನುಕೂಲವಾಗಲು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಶೇ.50 ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ.| ಪ್ರಾಣೇಶ ಹಾದಿಮನಿ, ಸಹಾಯಕ ಕೃಷಿ ನಿರ್ದೇಶಕ, ಯಲಬುರ್ಗಾ ಎಡೆಕುಂಟೆ ಒಡೆಯಲು ಕೃಷಿ ಇಲಾಖೆಯಿಂದ ವಿತರಿಸಲಾಗುವ ಸೈಕಲ್ ವೀಡರ್ ಸಾಧನ ತುಂಬಾ ಸಹಕಾರಿಯಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಕೆಲಸ ಮಾಡಿಕೊಳ್ಳಬಹುದು.| ನಾಗಪ್ಪ ಲೇಬಗೇರಿ, ಹುಣಸಿಹಾಳ ರೈತ