ಯಲಬುರ್ಗಾ: ಮಠಗಳು ಸದಾ ಭಕ್ತರ ಏಳಿಗೆಗಾಗಿ ಶ್ರಮಿಸುತ್ತವೆ ಎಂದು ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿಗಳ 23ನೇ ಪೀಠಾರೋಹಣದ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ರುದ್ರಾಭಿಷೇಕ, ಶಿವದೀಕ್ಷಾ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಠಗಳು ಭಕ್ತರ ಕಷ್ಟ-ಸುಖಗಳಿಗೆ ಸ್ಪಂದಿಸಿದಾಗ ಧಾರ್ಮಿಕತೆ ಬೆಳೆಯುತ್ತದೆ. ಇಲ್ಲಿಯ ಶ್ರೀಮಠವು ಬಹಳ ಭಕ್ತಗಣ ಹೊಂದಿದೆ ಎಂದರು.
ಜಿಗೇರಿಯ ಗುರುಸಿದ್ಧೇಶ್ವರ ಹಿರೇಮಠ ಸ್ವಾಮೀಜಿ ಮಾತನಾಡಿ, ಇಲ್ಲಿಯ ಶ್ರೀಗಳು ಮಠವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡು ಹೋಗುತ್ತಿದ್ದಾರೆ. ಅದರಂತೆ ಪ್ರತಿವರ್ಷ 7 ದಿನಗಳ ಕಾಲ ನಿರಂತರವಾಗಿ ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇಲ್ಲಿಯ ಭಕ್ತರ ಸಹಕಾರದಿಂದ ಮತ್ತು ಪ್ರತಿವರ್ಷ ಸಾಮೂಹಿಕ ವಿವಾಹಗಳನ್ನು ಮಾಡಲಾಗುತ್ತಿದೆ. ಅಲ್ಲದೆ ಸ್ವಾಮೀಜಿಗಳ ಸಾಮಾಜಿಕ ಕಾರ್ಯಕ್ಕೆ ಕೊನೆಯೇ ಇಲ್ಲ ಎಂದು ಬಣ್ಣಿಸಿದರು. ಜಗದೀಶ್ವರ ಹಿರೇಮಠ ಮಸೂತಿ ಪೂಜ್ಯರು ಮಾತನಾಡಿದರು.
ಇದಕ್ಕೂ ಮುನ್ನ ಪಟ್ಟಣದಲ್ಲಿ ಡೊಳ್ಳು ಕುಣಿತ, ಕುಂಭ ಕಳಸದೊಂದಿಗೆ ಶ್ರೀಗಳ ಅಡ್ಡ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಅನ್ನದಾನೇಶ್ವರ ಶಾಖಾ ಮಠ ಕುಕನೂರಿನ ಡಾ. ಮಹಾದೇವ ದೇವರು, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಉಪ ತಹಸೀಲ್ದಾರ್ ವಿರುಪಣ್ಣ ಹೊರಪೇಟಿ, ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ಎಂ.ಪಿ.ಮಲ್ಲಯ್ಯ, ಪ್ರಮುಖರಾದ ಡಾ.ಪ್ರಕಾಶ ಚೂರಿ, ಡಾ.ಸಂಜಯ್ ಚಿತ್ರಗಾರ, ಹಿರಿಯರಾದ ಚನ್ನಪ್ಪಗೌಡ್ರ ಮಾಲಿಪಾಟೀಲ, ಶರಣಯ್ಯ ಇಟಗಿ, ಕಳಕನಗೌಡ ಕಲ್ಲೂರ ಇತರರಿದ್ದರು.