ಯಲಬುರ್ಗಾದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ನಡೆದ ಎಂ.ಡಿ.ಅಲಿರಾಜ್ ಅವರ ‘ಕಾರ್ಮೋಡ’ ಕೃತಿ ಬಿಡುಗಡೆ, ಕವಿಗೋಷ್ಠಿ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ನಾಡೋಜ ಕುಂ.ವೀರಭದ್ರಪ್ಪ, ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ. ರವಿ, ಅಂಕಣಗಾರ್ತಿ ತೇಜವತಿ ಎಚ್.ಡಿ., ಕಸಾಪ ಮಾಜಿ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ, ಅಕ್ಬರ್ ಕಾಲಿಮಿರ್ಚಿ, ಎಂ.ಡಿ. ಅಲಿ, ಪತ್ರಕರ್ತ ಸಿರಾಜ್ ಬಿಸರಳ್ಳಿ ಇತರರಿದ್ದರು. 
ಜಿಲ್ಲೆ

ಯುವಪೀಳಿಗೆ ಪಂಪ, ಕುವೆಂಪು ಸಾಹಿತ್ಯ ಓದಲಿ

ನಾಡೋಜ ಕುಂ.ವೀರಭದ್ರಪ್ಪ ಸಲಹೆ | ಯಲಬುರ್ಗಾದಲ್ಲಿ ಕಾರ್ಮೋಡ ಕೃತಿ ಬಿಡುಗಡೆ

ಯಲಬುರ್ಗಾ: ಹನ್ನೆರಡನೇ ಶತಮಾನದಲ್ಲಿ ಭಾರತಕ್ಕೆ ವಲಸೆ ಬಂದ ಸೂಫಿ-ಸಂತರು ಇಂದು ಅಪ್ಪಟ ಭಾರತೀಯರಾಗಿದ್ದಾರೆ ಎಂದು ನಾಡೋಜ ಕುಂ.ವೀರಭದ್ರಪ್ಪ ಹೇಳಿದರು.

ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ಆರ್.ಸಂಕನೂರ ಎಜ್ಯುಕೇಷನ್ ಫೌಂಡೇಷನ್ ಮತ್ತು ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಯಲಬುರ್ಗಾ, ರಾಜ ಪ್ರಕಾಶನ ಯಲಬುರ್ಗಾ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಂ.ಡಿ.ಅಲಿರಾಜ್ ಅವರ ‘ಕಾರ್ಮೋಡ’ ಕೃತಿ ಬಿಡುಗಡೆ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಮಾತನಾಡಿದರು.

ಅನೇಕ ಪ್ರಮುಖ ಕವಿಗಳ ನಿಕಟ ಸಂಪರ್ಕಗಳಿಂದ ಅವರ ಕವಿತೆಗಳನ್ನು ಓದಿ ಪ್ರಭಾವಿತರಾಗಿದ್ದೇವೆ. ಆದರೆ, ಇಂದಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿರುವುದು ನೋವಿನ ಸಂಗತಿ. ಯುವಪೀಳಿಗೆ ಪಂಪ, ರನ್ನ, ಬೇಂದ್ರೆ, ಕುವೆಂಪು ಸೇರಿದಂತೆ ಅನೇಕ ಸಾಹಿತಿಗಳ ಬರಹಗಳನ್ನು ಓದಬೇಕಿದೆ ಎಂದ ಅವರು, ಅಲಿರಾಜ್ ಅವರು ಕಾರ್ಮೋಡ ಕೃತಿಯನ್ನು ಸುಂದರವಾಗಿ ರಚಿಸಿದ್ದಾರೆ ಎಂದು ಬಣ್ಣಿಸಿದರು.

ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಕನ್ನಡದ ಸಾಹಿತಿಗಳು, ಕವಿಗಳು ಹೆಚ್ಚಾಗಿ ಕಂಡು ಬರುತ್ತಿರುವುದು ಸಂತಸ. ನಾವು ಏರ್ಪಡಿಸಿದ್ದ ದಸರಾ ಕವಿಗೋಷ್ಠಿಯಲ್ಲಿ 120 ಕವಿಗಳು ಭಾಗವಹಿಸಿದ್ದರು. ಅಕ್ಷರ ಹಾಗೂ ಅವಕಾಶ ವಂಚಿತ ಸಮುದಾಯದಿಂದ ಬಂದವರು ನಾವು. ನಮ್ಮ ಭಾವನೆ, ವಿಚಾರಗಳನ್ನ ನಾವೇ ಬರೆಯಬೇಕಾಗಿದೆ. ಡಾ.ಬಾಬಾಸಾಹೇಬರು ನಮಗೆ ಪ್ರೇರಣೆ ಎಂದರು.

ತೃತೀಯಲಿಂಗಿ ಅತಿಥಿ ಉಪನ್ಯಾಸಕಿ ಕೆ.ಎನ್.ರೇಣುಕಾ, ಸಾಹಿತಿ ಮುನವರ್ ಜೋಗಿಬೆಟ್ಟು, ಸಿಂಧನೂರಿನ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮ ಸೇರಿ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪುರಸ್ಕಾರ ಪ್ರಶಸ್ತಿ ವಿತರಿಸಲಾಯಿತು. ನಂತರ ಕವಿಗಳಿಂದ ಕವಿತೆ ವಾಚನ ನಡೆಯಿತು.