ಜಿಲ್ಲೆ

ಲಾಪ್‌ಟಾಪ್ ಶಿಕ್ಷಣಕ್ಕೆ ಪೂರಕ; ಶಾಸಕ ಹಾಲಪ್ಪ ಆಚಾರ್ ಅಭಿಮತ

ಪದವಿ ವಿದ್ಯಾರ್ಥಿಗಳಿಗೆ ಉಚಿತ ವಿತರಣೆ

ಯಲಬುರ್ಗಾ: ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ನಲ್ಲಿ ತಂತ್ರಜ್ಞಾನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ ತಿಳಿಯಲು ಲ್ಯಾಪ್‌ಟಾಪ್ ಅನುಕೂಲವಾಗಲಿದೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

ಪಟ್ಟಣದ ಸಪ್ರ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಪ್ರಗತಿ ಹೊಂದುವ ನಿಟ್ಟಿನಲ್ಲಿ ಎಲ್ಲ ವರ್ಗದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿದೆ. ಶೈಕ್ಷಣಿಕ ಗುಣಮಟ್ಟ ಎತ್ತಿಸಲು ಈ ಯೋಜನೆ ಜಾರಿಗೆ ತಂದಿದ್ದು, ಪ್ರತಿಯೊಬ್ಬರೂ ಯೋಜನೆಯ ಸದ್ಬಳಕೆ ಮಾಡಿಕೊಲ್ಳಬೇಕು. ಒಳ್ಳೆಯ ಮಾಹಿತಿ ಕಲೆಹಾಕಲು ಉಪಯೋಗಿಸಬೇಕು. ಕಾಲಹರಣ ಮಾಡುವುದು ಸಲ್ಲ ಎಂದರು. ಇದೇ ವೇಳೆ 444 ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.


ನಮಗೂ ಲ್ಯಾಪ್‌ಟಾಪ್ ವಿತರಿಸಿ:  ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದಂತೆ, ತೃತೀಯ ಹಾಗೂ ಐದನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳಿಗೂ ವಿತರಸಬೇಕು ಎಂದು ಶಾಸಕ ಹಾಲಪ್ಪ ಆಚಾರ್‌ಗೆ ಒತ್ತಾಯಿಸಿದರು. 2017-18ನೇ ಸಾಲಿನಲ್ಲಿ ಎಲ್ಲ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ ಸರ್ಕಾರ ಲ್ಯಾಪ್‌ಟಾಪ್ ವಿತರಿಸಲು ಘೋಷಣೆ ಮಾಡಿತ್ತು. ಈಗ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ನೀಡಿದ್ದಾರೆ ಎಂದು ಆಗ್ರಹಿಸಿ, ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಶಾಸಕರಿಗೆ ಮನವಿ ಸಲ್ಲಿಸಿದರು. ಶಾಸಕರು ಪ್ರತಿಕ್ರಿಯಿಸಿ, ಪ್ರಾಚಾರ್ಯರ ಜತೆಗೆ ಮಾಹಿತಿ ಪಡೆದು ಎಲ್ಲರಿಗೂ ಲ್ಯಾಪ್‌ಟಾಪ್ ವಿತರಿಸುವ ಕುರಿತು ಸರ್ಕಾರ ಮತ್ತು ಸಂಬಂಧಿಸಿದ ಸಚಿವರ ಜೊತೆ ಚರ್ಚಿಸುವ ಭರವಸೆ ನೀಡಿದರು.

ಕೊಪ್ಪಳ ರಾಮಕೃಷ್ಣ ಆಶ್ರಮದ ಚೈತನ್ಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ್ ಅಧ್ಯಕ್ಷತೆ ವಹಿಸಿದ್ದರು. ಸಿಡಿಸಿ ಉಪಾಧ್ಯಕ್ಷ ಬಸಲಿಂಗಪ್ಪ ಭೂತೆ, ಮುಖಂಡರಾದ ಸಿ.ಎಚ್.ಪಾಟೀಲ್, ಈರಪ್ಪ ಕುಡಗುಂಟಿ, ವೀರಣ್ಣ ಹುಬ್ಬಳ್ಳಿ, ಪ್ರಭುಸ್ವಾಮಿ ಸಾಲಿಮಠ, ಬಸವರಾಜ ಶ್ಯಾಗೋಟಿ, ಉಪ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಯುವ ಜನತೆ ಸದೃಢ ದೇಶ ಕಟ್ಟುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಸಂದೇಶ ಹಾಗೂ ಪ್ರೇರಣೆ ಮೈಗೂಡಿಸಿಕೊಂಡಾಗ ಯುವಶಕ್ತಿ ಉದಯವಾಗಲು ಸಾಧ್ಯವಾಗುತ್ತದೆ.| ಚೈತನ್ಯಾನಂದ ಸ್ವಾಮೀಜಿ ರಾಮಕೃಷ್ಣ ಆಶ್ರಮ, ಕೊಪ್ಪಳ