ಕುಕನೂರಿನ ಹೊರವಲಯದ ರೈತರ ಜಮೀನಲ್ಲಿ ಮೆಕ್ಕೆಜೋಳ ಮಳೆ ಕೊರತೆಯಿಂದ ಒಣಗಿರುವುದು. 
ಜಿಲ್ಲೆ

ಬರಪೀಡಿತ ಪ್ರದೇಶ ಘೋಷಣೆಗೆ ಹೆಚ್ಚಿದ ಒತ್ತಡ

ಪ್ರವೀಣ ಉದುಸಾ ದಲಬಂಜನ್

ಯಲಬುರ್ಗಾ: ಕ್ಷೇತ್ರದ ಕೃಷಿಯು ಮಳೆ ಮೇಲೆ ಸಂಪೂರ್ಣ ಅವಲಂಬಿತಗೊಂಡಿದೆ. ಪ್ರಸ್ತುತ ವರ್ಷದಲ್ಲಿ ಮಳೆ ಕೊರೆತೆಯಿಂದಾಗಿ ಬಿತ್ತನೆಗೊಂಡ ಬೆಳೆಗಳು ಒಣಗಿವೆ. ಹೀಗಾಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯಗೆ ಶಾಸಕ ಬಸವರಾಜ ರಾಯರಡ್ಡಿ ಪತ್ರ ಬರೆದು ವಸ್ತುಸ್ಥಿತಿಯನ್ನು ತಿಳಿಸಲು ಮುಂದಾಗಿದ್ದಾರೆ.

ಎಂಟು ವರ್ಷ ಮಳೆರಾಯ ಮುನಿಸಿ

ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳು ಉತ್ತರ ಒಣಪ್ರದೇಶ ವಲಯಕ್ಕೆ ಒಳಪಟ್ಟಿದೆ. 10 ವರ್ಷಗಳಲ್ಲಿ ಎರಡು ವರ್ಷ ವಾಡಿಕೆ ಮಳೆ ಸುರಿದಿದೆ. ಉಳಿದ ಎಂಟು ವರ್ಷಗಳಲ್ಲಿ ಸಕಾಲಕ್ಕೆ ಮಳೆ ಬಾರದೆ ಬರಗಾಲಕ್ಕೆ ತುತ್ತಾಗಿದೆ. ಈ ವರ್ಷವೂ ಮಳೆ ಕೊರತೆಯಿಂದ ಬಿತ್ತನೆ ಮಾಡಿದ ವಿವಿಧ ಬೆಳೆಗಳು ಒಣಗುವ ಸ್ಥಿತಿಗೆ ಬಂದಿದೆ. ಬೆಳೆ ಕಳೆದುಕೊಂಡ ಬಾಧೆ ಒಂದು ಕಡೆಯಾದರೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ.

ರೈತರಿಗೆ ಅಪಾರ ನಷ್ಟ

ಪ್ರಸಕ್ತ ವರ್ಷದಲ್ಲಿ ಯಲಬುರ್ಗಾ ಮತ್ತು ಕುಕನೂರು ತಾಲೂಕಿನಲ್ಲಿ ಪೂರ್ವ ಮುಂಗಾರಿನಲ್ಲಿ (ಮಾರ್ಚ್‌ದಿಂದ ಮೇ. ವರೆಗೆ) ವಾಡಿಕೆ ಮಳೆ ಸರಾಸರಿ 99 ಮಿ.ಮಿ ಆಗಬೇಕಿತ್ತು. ಆದರೆ ಸುರಿದಿದ್ದು 18 ಮಿ.ಮಿ ಮಾತ್ರ. ಶೇ.21 ಮಳೆ ಕೊರತೆಯಾಗಿದೆ. ಇನ್ನು ಮುಂಗಾರು ಹಂಗಾಮಿನಲ್ಲಿ (ಜೂನ್‌ದಿಂದ ಆಗಷ್ಟ್‌ವರೆಗೆ) 234.4 ಮಿ.ಮಿ ವಾಡಿಕೆ ಮಳೆ ಆಗಬೇಕಿತ್ತು. ಆದರೆ, ಆಗಿದ್ದು 187.90 ಮಿ.ಮಿ ಮಾತ್ರ. ಶೇ.20 ರಷ್ಟು ಮಳೆಯಾಗಿಲ್ಲ.

ಜಾನುವಾರುಗಳಿಗೆ ಆಹಾರದ ಅಭಾವ: ಕ್ಷೇತ್ರದಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 80,306 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆಯ ಅಭಾವದಿಂದ ಕೇವಲ 62,165 ಹೆಕ್ಟೇರ್ (ಶೇ.77.41) ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಈ ಪೈಕಿ ಮಳೆಯ ಅಭಾವದಿಂದಾಗಿ ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ, ತೊಗರಿ, ಹೆಸರು, ಈರುಳ್ಳಿ ಹಾಗೂ ಇತರ ಬೆಳೆಗಳು ಒಟ್ಟು 47,245 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಕುಂಠಿತಗೊಂಡಿದೆ. ಕೇವಲ ಶೇ.30ರಿಂದ 35 ಇಳುವರಿ ನಿರೀಕ್ಷಿಸಬಹುದಾಗಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ನಷ್ಟವಾದರೆ. ಜಾನುವಾರುಗಳಿಗೆ ಆಹಾರದ ಅಭಾಯ ಎದುರಾಗಿದೆ.

ರೈತರಿಗೆ ಪರಿಹಾರ ನೀಡಿ: ಕ್ಷೇತ್ರದ ಅವಳಿ ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಿ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾರ್ಗ ಸೂಚಿಯಲ್ಲಿರುವಂತೆ ರೈತರಿಗೆ ಅಗತ್ಯ ಆರ್ಥಿಕ ನೆರವುನ್ನು(ಇನ್‌ಪುಟ್ ಸಬ್ಸಿಡಿ) ಮಂಜೂರು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಬಸವರಾಜ ರಾಯರಡ್ಡಿ ಅವರು ಸಿಎಂ ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.