ಜಿಲ್ಲೆ

ಅಭಿವೃದ್ಧಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ: ತರಲಕಟ್ಟಿಯಲ್ಲಿ ಸಚಿವ ಆಚಾರ್ ಹೇಳಿಕೆ

ಯಲಬುರ್ಗಾ: ಮಕ್ಕಳ ಭವಿಷ್ಯ ರೂಪಿಸುವ ಶಾಲೆಗಳು ದೇವಾಲಯವಾಗಿದ್ದು, ಸ್ವಚ್ಛ, ಸುಂದರವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಒಸಾಟಾ ಕಂಪನಿ ಅಂದಾಜು 42 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ 4 ನೂತನ ಕೊಠಡಿಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿ ಕಾರ್ಯಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಮುಖ್ಯ. ಆ ನಿಟ್ಟಿನಲ್ಲಿ ಒಸಾಟಾ ಕಂಪನಿ ಕಾರ್ಯ ಶ್ಲಾಘನೀಯವಾಗಿದ್ದು, ವಿವಿಧ ಸಂಘ, ಸಂಸ್ಥೆಗಳು ಕೈಜೋಡಿಸುತ್ತಿವೆ. ಗುಣಮಟ್ಟದ ಕೆಲಸಗಳು ನಡೆಯಬೇಕಾದರೆ ಸಾರ್ವಜನಿಕರ ಜವಾಬ್ದಾರಿ ಅಗತ್ಯವಿದೆ. ಅಭಿವೃದ್ಧಿಗಾಗಿ ಸರ್ಕಾರ ಕೋಟಿಗಟ್ಟಲೆ ಅನುದಾನ ಖರ್ಚು ಮಾಡಿದರೂ ಸಾಕಾಗುತ್ತಿಲ್ಲ. ಜವಾಬ್ದಾರಿ ಮರೆತು ಬದುಕು ನಡೆಸುತ್ತಿದ್ದು, ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದರು.

ಒಸಾಟಾ ಕಂಪನಿಯ ಬಾಲಕೃಷ್ಣರಾವ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಕಂಪನಿಯ ಮೂಲ ಉದ್ದೇಶ. ಶಾಲೆಗಳ ನಿರ್ವಹಣೆಗೆ ಸಾರ್ವಜನಿಕರು ಮುಂದಾಗಬೇಕು ಎಂದರು.

ಕಂಪನಿಯ ಗೋಪಾಲಾಚಾರ್ ಅಂಜಕ್ಕಿ, ಎಸ್ಡಿಎಂಸಿ ಅಧ್ಯಕ್ಷ ಮಲ್ಲನಗೌಡ ಪಾಟೀಲ್ ಮಾತನಾಡಿದರು. ಒಸಾಟಾ ಕಂಪನಿ ಸಿಬ್ಬಂದಿ ಹಾಗೂ ಭೂದಾನಿಗಳನ್ನು ಸನ್ಮಾನಿಸಲಾಯಿತು. ಕಂಪನಿಯ ಬಾಲಾಜಿ ಕಿಶನ್‌ರಾವ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ಬಿ.ಕಣವಿ, ಡಿಡಿಪಿಐ ಮುತ್ತುರಡ್ಡಿ, ಉಪಪ್ರಾಚಾರ್ಯ ಚಂದ್ರಕಾಂತ ಕಲ್ಯಾಣಮಠ, ಬಿಇಒ ಬಿ.ಮೌನೇಶ ಇತರರಿದ್ದರು.