ಯಲಬುರ್ಗಾದ ತಾಪಂ ಕಚೇರಿಯಲ್ಲಿ ಲೋಕಾಯುಕ್ತ ಇಲಾಖೆಯಿಂದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಸಭೆ ಹಮ್ಮಿಕೊಳ್ಳಲಾಗಿತ್ತು. ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಚಂದ್ರಪ್ಪ ಈಟಿ, ಇನ್ಸ್‌ಪೆಕ್ಟರ್‌ಗಳಾದ ಸುನೀಲ್ ಮೇಗಲಮನಿ, ಶೈಲಾ ಪ್ಯಾಟಿಶಟ್ಟರ್, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ್ ಇತರರಿದ್ದರು. 
ಜಿಲ್ಲೆ

ಸರ್ಕಾರಿ ಆಸ್ತಿಗಳನ್ನು ಉಳಿಸುವ ಕಾರ್ಯವಾಗಲಿ

ಪ್ರವೀಣ ಉದುಸಾ ದಲಬಂಜನ್

ಯಲಬುರ್ಗಾ: ಇಲಾಖೆಗಳಿಗೆ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳು ಸಕಾಲಕ್ಕೆ ವಿಲೇವಾರಿ ಆಗಲಿ ಎಂದು ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಚಂದ್ರಪ್ಪ ಈಟಿ ಹೇಳಿದರು.

ಪಟ್ಟಣದ ತಾಪಂ ಕಚೇರಿಯಲ್ಲಿ ಲೋಕಾಯುಕ್ತ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಆಸ್ತಿಗಳನ್ನು ಅನಧಿಕೃತವಾಗಿ ಬೇರೆಯವರು ತಮ್ಮ ಹೆಸರಿನಲ್ಲಿ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ದೂರುಗಳು ದಾಖಲಾಗಿವೆ. ಸರ್ಕಾರಿ ಆಸ್ತಿ ಅತಿಕ್ರಮಣ ಬಗ್ಗೆ ದೂರು ಬಂದಾಗ ಮಾತ್ರ ಕ್ರಮ ವಹಿಸದೇ ಮುಂಚೆಯೇ ಕ್ರಮ ಕೈಗೊಳ್ಳಬೇಕು. ಇದರ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಮತ್ತು ಎಲ್ಲ ಸರ್ಕಾರಿ ಇಲಾಖೆ ಕಚೇರಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಕಾರ್ಯವಾಗಲಿ. ಸಮಸ್ಯೆಗಳ ಬಗ್ಗೆ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಸೌಜನ್ಯತೆಯಿಂದ ವರ್ತಿಸಿ. ಸರ್ಕಾರಿ ಇಲಾಖೆಗಳ ದಾಖಲಾತಿಗಳ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಇಲಾಖೆಗಳಿಂದ ಸಿಗುವ ಸರ್ಕಾರಿ ಸೌಲಭ್ಯಗಳ ಕುರಿತು ಕಚೇರಿಯಲ್ಲಿ ಮಾಹಿತಿ ಫಲಕ ಹಾಕಬೇಕು. ಅಧಿಕಾರಿಗಳು ಗುರುತಿನ ಚೀಟಿ ಹಾಕಿಕೊಳ್ಳಬೇಕು ಎಂದರು.

ಸರಿಯಾದ ರೀತಿಯಲ್ಲಿ ದಾಖಲೆಗಳನ್ನು ನಿರ್ವಹಣೆ ಮಾಡದೇ ಇರುವ ಕಾರಣಕ್ಕೆ ಮಾಹಿತಿ ಹಕ್ಕು ಅರ್ಜಿದಾರರ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಅಧಿಕಾರಿಗಳು ದಾಖಲೆಗಳ ನಿರ್ವಹಣೆ ಮತ್ತು ಕಾಯ್ದುಕೊಳ್ಳಲು ಜವಾಬ್ದಾರಿ ವಹಿಸಬೇಕು ಎಂದರು.