ಜಿಲ್ಲೆ

ಪೈಪ್‌ಲೈನ್ ಕೂಲಿ ಕಾರ್ಮಿಕರಿಗೆ ದಿನಸಿ ವಿತರಣೆ

ಯಲಬುರ್ಗಾ: ತಾಲೂಕಿನ ಮಾಟಲದಿನ್ನಿ ಗ್ರಾಪಂ ವ್ಯಾಪ್ತಿಯ ಪುಟಗಮರಿ ಬಳಿಯ ರಾಷ್ಟ್ರೀಯ ಹೆದ್ದಾರಿ ಹತ್ತಿರ ಪೈಪ್‌ಲೈನ್ ಕೆಲಸ ಮಾಡುತ್ತಿರುವ ನೆರೆ ರಾಜ್ಯದ 16 ಜನರಿಗೆ ಗ್ರಾಮಸ್ಥರಿಂದ ಕಿರಾಣಿ ದಿನಸಿ ಹಾಗೂ ತರಕಾರಿ ಶುಕ್ರವಾರ ವಿತರಿಸಲಾಯಿತು.

ಗ್ರಾಪಂ ಪಿಡಿಒ ಹನುಮಂತಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಕುಡತಿನಿ ಹತ್ತಿರದ ಕಾರ್ಖಾನೆಯೊಂದಕ್ಕೆ ಸಂಪರ್ಕ ಕಲ್ಪಿಸುವ ಪೈಪ್‌ಲೈನ್ ಕಾಮಗಾರಿ ಕೆಲಸದಲ್ಲಿ ತೊಡಗಿರುವ ಉತ್ತರ ಪ್ರದೇಶದ 16 ಜನ ಲಾಕ್‌ಡೌನ್‌ನಿಂದಾಗಿ ಇಲ್ಲೇ ಉಳಿದಿದ್ದಾರೆ. ಆದ್ದರಿಂದ ಸ್ಥಳೀಯರು ಸೇರಿ ಕಿರಾಣಿ ಮತ್ತು ತರಕಾರಿ ಸಂಗ್ರಹಿಸಿ ನೀಡಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಕರೊನಾ ಮುಂಜಾಗ್ರತೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಉಪ ತಹಸೀಲ್ದಾರ್ ವಿಜಯಕುಮಾರ ಗುಂಡೂರು, ಪ್ರಮುಖರಾದ ಶರಣಗೌಡ ಪೊಲೀಸ್ ಪಾಟೀಲ್, ತಿಪ್ಪಣ್ಣ ಹೊಸಮನಿ, ಬಿಸೆಟ್ಟೆಪ್ಪ ವಟಪರವಿ, ಶಿವನಗೌಡ ಮಾಲಿಪಾಟೀಲ್, ಸಂಗಮೆಶ, ನಾಗನಗೌಡ ಗೌಡ್ರ, ಬಾಳನಗೌಡ ಇತರರು ಇದ್ದರು.