ಸುವರ್ಣ ಕರ್ನಾಟಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಆಗ್ರಹ
ಯಲಬುರ್ಗಾ: ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ರೈತರಿಗೆ ಕೃಷಿ ಚಟುವಟಿಕೆ ಅನುಕೂಲಕ್ಕೆ ಒದಗಿಸುವ ವಿದ್ಯುತ್ ಅನ್ನು ಬೆಳಗ್ಗೆ 9 ರಿಂದ 11 ಗಂಟೆಗೆ ಒದಗಿಸಬೇಕೆಂದು ಒತ್ತಾಯಿಸಿ ಸುವರ್ಣ ಕರ್ನಾಟಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದ ಜೆಸ್ಕಾಂ ಇಲಾಖೆ ಕಚೇರಿ ಸಿಬ್ಬಂದಿ ಶಿವಕುಮಾರ್‌ಗೆ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಎ.ಕೆ.ಹೊಸಂಗಡಿ ಮಾತನಾಡಿ, ಹಿರೇಮ್ಯಾಗೇರಿ ಐ.ಪಿ.ಸೆಟ್‌ನಿಂದ ಬೆಳಗ್ಗೆ 4 ರಿಂದ 11 ರವರೆಗೆ ವಿದ್ಯುತ್ ಒದಗಿಸುತ್ತಿದ್ದು, ಕತ್ತಲಲ್ಲಿ ರೈತರಿಗೆ ತೊಂದರೆಯಾಗುತ್ತಿದೆ. ಈಗಲೂ 4 ರಿಂದ 11 ರವರೆಗೆ ವಿದ್ಯುತ್ ಕೊಡುತ್ತಿದ್ದಾರೆ. ಬೆಳಗ್ಗೆ 9 ರಿಂದ ಸಂಜೆ 4ರ ವರೆಗೆ ವಿದ್ಯುತ್ ಕಲ್ಪಿಸಿದರೆ, ಅನುಕೂಲವಾಗುತ್ತದೆ. ಇದರಿಂದ ರೈತರಿಗೆ ಯಾವುದೇ ಅನಾಹುತ ಆಗುವುದಿಲ್ಲ. ಈ ಕುರಿತು ಜೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದರೆ, ವಿದ್ಯುತ್ ಪೂರೈಕೆ ಸಮಯ ಬದಲಿಸುತ್ತಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಸರಿಯಾದ ವೇಳೆಗೆ ವಿದ್ಯುತ್ ಒದಗಿಸಿ ರೈತರಿಗೆ ಅನುಕೂಲ ಮಾಡಬೇಕು. ಇಲ್ಲವಾದರೆ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಪದಾಧಿಕಾರಿಗಳಾದ ಆನಂದ ಸವಣೂರು, ಮಹಾಂತೇಶ ಅಂಗಡಿ, ಬಸವರಾಜ ಅಂಗಡಿ, ಬಾಬುಜಿ ಯಲಬುರ್ಗಿ, ಸೋಮಶೇಖರ ರಡ್ಡಿ, ರಾಯಪ್ಪ ಮಾಡಲಗೇರಿ ಇತರರಿದ್ದರು.