ಯಲಬುರ್ಗಾ: ತಾಲೂಕಿನ ಗುಂಟಮಡು ಗ್ರಾಮದ ಹಳ್ಳ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದು, ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಬೋದೂರು ಗ್ರಾಪಂ ವ್ಯಾಪ್ತಿಗೆ ಒಳಪಡುವ ತಾಲೂಕಿನ ಕಟ್ಟಕಡೆ ಹಳ್ಳಿ ಗುಂಟಮಡುವಿನಲ್ಲಿ 150ಕ್ಕೂ ಅಧಿಕ ಜನ ವಸತಿಯಿದೆ. ಗ್ರಾಮದ ಹಳ್ಳದ ಕೋಡಿ ಕಳೆದ ವಾರದಿಂದ ಸುರಿಯುತ್ತಿರುವ ಮಳೆಗೆ ತುಂಬಿ ಹರಿಯುತ್ತಿದೆ. ಹಳ್ಳ ರಸ್ತೆಗೆ ಹೊಂದಿಕೊಂಡಿದ್ದು, ಕಿತ್ತು ತಗ್ಗು ಗುಂಡಿಗಳು ಬಿದ್ದಿವೆ. ಇದರಿಂದ ಸಾರ್ವಜನಿಕರು, ಜಮೀನಿಗೆ ತೆರಳುವ ರೈತರ ಎತ್ತಿನ ಬಂಡಿ ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗಿದ್ದು, ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ.
ರಸ್ತೆ ದುರಸ್ತಿಗೊಳಿಸಿ: ಹಳ್ಳದ ಮೂಲಕ ಹಾದು ಹೋಗಿರುವ ರಸ್ತೆಯನ್ನು ಸರಿಪಡಿಸುವಂತೆ ಹಲವು ಬಾರಿ ಗ್ರಾಪಂ ಅಧಿಕಾರಿಗಳು ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಹಳ್ಳದ ರಸ್ತೆಯನ್ನು ಸರಿಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸುವಂತೆ ಗ್ರಾಮಸ್ಥರಾದ ಯಂಕಪ್ಪ ಅಳ್ಳಳ್ಳಿ, ರಮೇಶ ಹುಲೇಗುಡ್ಡ, ಶರಣಪ್ಪ ಕುರ್ನಾಳ, ಲಂಕೇಶ ಪೊಲೀಸ್ ಪಾಟೀಲ್, ಯಮನೂರ ಮಲ್ಲಾಪುರ, ಬಾಲಯ್ಯ ಗ್ಯಾನಪ್ಪಯ್ಯನವರ್, ಯಮನೂರ ಹುಲೇಗುಡ್ಡ ಒತ್ತಾಯಿಸಿದ್ದಾರೆ.
ಗುಂಟಮಡು ಹಳ್ಳದ ರಸ್ತೆ ಹದಗೆಟ್ಟಿದ್ದು, ಸಾರ್ವಜನಿಕರ ಓಡಾಟದ ಅನುಕೂಲಕ್ಕೆ ಮರಮ್ (ಗರಸು) ಏರಿಸಲಾಗಿತ್ತು. ಸದ್ಯ ಮಳೆಗಾಲ ಇದ್ದು, ಹಳ್ಳ ತುಂಬಿ ಹರಿಯುತ್ತಿದೆ. ಆದ್ದರಿಂದ ಮತ್ತೆ ರಸ್ತೆ ಕಿತ್ತಿದೆ. ಗ್ರಾಪಂನಿಂದ ಮರಮ್ ಹಾಕಿಸಲಾಗುವುದು.| ಗೋಣೆಪ್ಪ ಜಿರ್ಲಿ, ಗ್ರಾಪಂ ಪಿಡಿಒ ಬೋದೂರು