ಜಿಲ್ಲೆ

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ; ಎಸ್‌ಎಫ್‌ಐ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ


ಯಲಬುರ್ಗಾ: ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ಗೆ ಬರೆದ ಮನವಿಯನ್ನು ಗ್ರೇಡ್ 2 ತಹಸೀಲ್ದಾರ್ ನಾಗಪ್ಪ ಸಜ್ಜನ್‌ಗೆ ಮಂಗಳವಾರ ಸಲ್ಲಿಸಿದರು.

ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಸಿದ್ದಪ್ಪ ಮಾತನಾಡಿ, ಉಪನ್ಯಾಸಕರ ಧರಣಿಯಿಂದಾಗಿ ಕಾಲೇಜುಗಳ ತರಗತಿ ನಡೆಯುತ್ತಿಲ್ಲ. ರಾಜ್ಯದ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಕಾಯಂ ಮತ್ತು ಇತರ ಬೇಡಿಕೆಗಳನ್ನು ಇಟ್ಟುಕೊಂಡು ಧಾರವಾಡದಲ್ಲಿ ನಡೆಸುತ್ತಿರುವ ಧರಣಿಯನ್ನು ಎಸ್‌ಎಫ್‌ಐ ಬೆಂಬಲಿಸುತ್ತದೆ. ಸರ್ಕಾರ ಕೂಡಲೇ ಸೇವಾ ಭದ್ರತೆ ಮತ್ತು ಇತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಈ ಮೂಲಕ ತರಗತಿಗಳು ಸುಗಮವಾಗಿ ಮುಂದುವರಿಯುವಂತೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.