ಯಲಬುರ್ಗಾದ ತಾಪಂ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿದರು. ತಾಪಂ ಇಒ ಸಂತೋಷ್ ಪಾಟೀಲ್, ಆರ್‌ಡಬ್ಲ್ಯುಎಸ್ ಇಲಾಖೆ ಇಇ ಮಹೇಶ್ ಶಾಸ್ತ್ರಿ, ಎಇಇ ರಿಜ್ವಾನಾ ಬೇಗಂ, ತಾಪಂ ಸಹಾಯಕ ನಿರ್ದೇಶಕರಾದ ಹನುಮಂತಗೌಡ ಪಾಟೀಲ್, ಫಕೀರಪ್ಪ ಕಟ್ಟಿಮನಿ, ಶರಣಪ್ಪ ಕೆಳಗಿನಮನಿ ಇದ್ದರು.  
ಜಿಲ್ಲೆ

ಕುಡಿವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ

ಯಲಬುರ್ಗಾ: ಬೇಸಿಗೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಅವಳಿ ತಾಲೂಕಿನಲ್ಲಿ ಜನತೆಗೆ ಕುಡಿವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಯಲಬುರ್ಗಾ-ಕುಕನೂರು ತಾಲೂಕಿನ ಕುಡಿವ ನೀರು ನಿರ್ವಹಣೆ, ಜೆಜೆಎಂ ಕಾಮಗಾರಿ, ನರೇಗಾ ಯೋಜನೆ ಮತ್ತು ಇತರ ವಿಷಯಗಳ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ಯಾವ ಭಾಗದಲ್ಲೂ ಜನ, ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆಯಾಗಬಾರದು. ಗ್ರಾಪಂನಲ್ಲಿ ವಾರಕ್ಕೆ ಎರಡು ಬಾರಿ ಸಭೆ ನಡೆಸಿ ತಾಪಂಗೆ ವರದಿ ಸಲ್ಲಿಸಬೇಕು. ತುರ್ತು ಕುಡಿವ ನೀರಿನ ಸಮಸ್ಯೆ ಎದುರಾದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಈಗಾಗಲೇ ಎರಡು ತಾಲೂಕಿನಲ್ಲಿ ಜೆಜೆಎಂ ಕಾಮಗಾರಿ ಮುಂದುವರಿದಿದ್ದು, ತುರ್ತಾಗಿ ಕೆಲಸ ಮುಗಿಸಬೇಕು. ಸಕಾಲ ಅರ್ಜಿ, ಮುಂತಾದವುಗಳನ್ನು ಕೂಡಲೇ ಪರಿಹರಿಸಬೇಕು ಎಂದರು.

ನಿರಂತರ ಕೆಲಸ ನೀಡಿ

ಬೇಸಿಗೆಯಲ್ಲಿ ನಿರಂತರವಾಗಿ ನರೇಗಾದಡಿ ಕೂಲಿಕಾರರಿಗೆ ಕೆಲಸ ಒದಗಿಸಬೇಕು. ರೈತರಿಗೆ ಸಾಮೂಹಿಕ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಸಂಬಂಧಪಟ್ಟ ಇಲಾಖೆಯವರು ನೀಡುವ ಮೂಲಕ ಗ್ರಾಮದಲ್ಲೇ ಕೆಲಸ ಒದಗಿಸಿಕೊಡಬೇಕು. ಯೋಜನೆಯ ಸದುಪಯೋಗವಾಗಲು ಎಲ್ಲ ಪಿಡಿಒಗಳು ಮುಂಜಾಗ್ರೆತೆ ವಹಿಸಬೇಕು ಎಂದು ಸಿಇಒ ಸೂಚಿಸಿದರು.

ತಾಪಂ ಇಒ ಸಂತೋಷ್ ಪಾಟೀಲ್, ಆರ್‌ಡಬ್ಲ್ಯುಎಸ್ ಇಲಾಖೆ ಇಇ ಮಹೇಶ್ ಶಾಸ್ತ್ರಿ, ಎಇಇ ರಿಜ್ವಾನಾ ಬೇಗಂ, ತಾಪಂ ಸಹಾಯಕ ನಿರ್ದೇಶಕರಾದ ಹನುಮಂತಗೌಡ ಪಾಟೀಲ್, ಫಕೀರಪ್ಪ ಕಟ್ಟಿಮನಿ, ಶರಣಪ್ಪ ಕೆಳಗಿನಮನಿ, ಅನುಷ್ಠಾನ ಇಲಾಖೆ ಅಧಿಕಾರಿಗಳು, ಅವಳಿ ತಾಲೂಕಿನ ಎಲ್ಲ ಗ್ರಾಪಂ ಪಿಡಿಒ ಹಾಗೂ ನರೇಗಾ ಸಿಬ್ಬಂದಿ ಇದ್ದರು.