ಯಲಬುರ್ಗಾ: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪುರಸಭೆಯ ಮುಖ್ಯಾಧಿಕಾರಿ ಅಭಯ್‌ಕುಮಾರ್ ಮೇಲೆ ನಡೆದ ಹಲ್ಲೆ ಖಂಡಿಸಿ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ, ಕಲ್ಯಾಣ ಕರ್ನಾಟಕ ಪೌರಸೇವಾ ನೌಕರರ ಸೇವಾ ಸಂಘದಿಂದ ಪಟ್ಟಣದ ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಪಪಂ ಮುಖ್ಯಾಧಿಕಾರಿ ಉಮೇಶ ಹಿರೇಮಠ ಮಾತನಾಡಿ, ಚಿಂಚೋಳಿಯ ಪುರಸಭೆ ಸಿಒ ಅಭಯ್‌ಕುಮಾರ್‌ರನ್ನು ಬುಧವಾರ ಇಬ್ಬರು ಪುರಸಭೆ ಸದಸ್ಯರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ರಾಜ್ಯದ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ, ನೌಕರರಿಗೆ ಕೆಲಸದಲ್ಲಿ ಅಡತಡೆಯಾಗದಂತೆ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷರಾದ ರಮೇಶ ಬೇಲೇರಿ, ಹನುಮಂತಪ್ಪ ಛಲವಾದಿ, ಕಾರ್ಯದರ್ಶಿ ಸುಭಾಸ್ ಭಾವಿಮನಿ, ಇಂಜಿನಿಯರ್ ಉಮೇಶ ಬೇಲಿ, ಸಿಬ್ಬಂದಿ ಬಸಲಿಂಗಪ್ಪ ಭಾಸ್ಕರ್, ಭಾರತಿ, ನಾರಾಯಣ ಗಂಗಾಖೇಡ, ಹುಲಗಪ್ಪ ಗಂಜಿ, ಸಿಮ್ಮಣ್ಣ ಬನ್ನಿಮರದ ಇತರರಿದ್ದರು.