ಜಿಲ್ಲೆ

ಭಾವನಾತ್ಮಕ ವಿಚಾರಗಳಿಂದ ಬಿಜೆಪಿ ರಾಜಕಾರಣ: ಮಾಜಿ ಸಚಿವ ಬಸವರಾಜ ರಾಯರಡ್ಡಿ ಟೀಕೆ

ಯಲಬುರ್ಗಾ: ಜಾತಿ, ಧರ್ಮ ಹಾಗೂ ಮೀಸಲಾತಿ ಕುರಿತು ಬಿಜೆಪಿ ಮಾಡಿದ ಅಪಪ್ರಚಾರದಿಂದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆಯೇ ಹೊರತು ಜನರು ತಿರಸ್ಕಾರ ಮಾಡಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2018ರ ಚುನಾವಣೆಯಲ್ಲಿ ಒಟ್ಟು 224 ಸ್ಥಾನಗಳ ಪೈಕಿ ಬಿಜೆಪಿ 104, ಕಾಂಗ್ರೆಸ್ 84 ಹಾಗೂ ಜೆಡಿಎಸ್ 40 ಕ್ಷೇತ್ರದಲ್ಲಿ ಗೆದ್ದಿದೆ. ಆದರೂ ಬಿಜೆಪಿಗೆ ಜನ ಸ್ಪಷ್ಟ ಬಹುಮತ ನೀಡಿಲ್ಲ. ಸಿದ್ದರಾಮಯ್ಯ ಹಾಗೂ ನಾನು ಸೇರಿದಂತೆ ಬಹುತೇಕ ಸಚಿವರು ಸೋತಿದ್ದೇವೆ. ಬೇರೆ ಬೇರೆ ವಿಚಾರಗಳಿಂದ ಸೋಲಾಗಿದೆ. ಬಿಜೆಪಿಗರ ಅಪಪ್ರಚಾರ, ಅನಾಚಾರದಿಂದ 17 ಶಾಸಕರಿಗೆ ಹಣ, ಅಧಿಕಾರದ ಆಮಿಷವೊಡ್ಡಿ ರಾಜೀನಾಮೆ ಕೊಡಿಸಿ ಸರ್ಕಾರ ರಚಿಸಿತು. ಧರ್ಮ, ಮೀಸಲಾತಿಯಂಥ ಭಾವನಾತ್ಮಕ ವಿಚಾರಗಳ ಮೂಲಕ ರಾಜಕಾರಣ ಮಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.

ಕಾಮಗಾರಿಯಲ್ಲಿ 40 ಪರ್ಸೆಂಟ್ ಕಮಿಷನ್ ಕುರಿತು ಗುತ್ತಿಗೆದಾರರ ಸಂಘ ಪ್ರಧಾನಿ ಮೋದಿಗೆ ಪತ್ರ ಬರೆದರೂ ಯಾವುದೇ ತನಿಖೆ ನಡೆಸಿಲ್ಲ. ಎಲ್ಲ ಕಾಲದಲ್ಲಿ ಭ್ರಷ್ಟಾಚಾರ ಇದ್ದರೂ ಇತಿಮಿತಿಯಲ್ಲಿತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ ವ್ಯಾಪಕವಾಗಿರುವುದ ಸಾಬೀತಾಗಿದೆ. ಕೊಪ್ಪಳ ಜಿಲ್ಲೆಗೆ ದೊಡ್ಡ ಮಟ್ಟದ ಕೆಲಸಗಳಾಗಿಲ್ಲ. ನೆಪಕ್ಕೆ ಮಾತ್ರ ಮಾದರಿ ವಿವಿ ಘೋಷಣೆ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಂದಾಗಿ ಪಕ್ಷ ಸಂಘಟಿಸುತ್ತೇವೆ. ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸಾರ್ವಜನಿಕ ಸಭೆ, ಸಮಾರಂಭಗಳು ಬೀದರ್‌ನ ಬಸವಕಲ್ಯಾಣದಿಂದ ಆರಂಭವಾಗಲಿವೆ. 2023ರ ಚುನಾವಣೆಯಲ್ಲಿ 150ಕೂ ಹೆಚ್ಚು ಸ್ಥಾನ ಗಳಿಸುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೃಷ್ಣಾ ಬಿಸ್ಕೀಂ ನೀರಾವರಿ ಯೋಜನೆಗೆ ಸಂಬಂಧಿಸಿದ ಪುಸ್ತಕವನ್ನು ಕಾರ್ಯಕರ್ತರ ಮಕ್ಕಳಿಂದ ಬಿಡಗುಡೆಗೊಳಿಸಲಾಯಿತು. ಮಕ್ಕಳ ದಿನಾಚರಣೆ ನಿಮಿತ್ತ ಜವಾಹರಲಾಲ್ ನೆಹರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ಹನುಮಂತಗೌಡ ಚಂಡೂರು, ರಾಘವೇಂದ್ರಾಚಾರ್ ಜೋಶಿ, ಯಂಕಣ್ಣ ಯರಾಶಿ, ಮಹೇಶ ಹಳ್ಳಿ, ಎ.ಜಿ.ಬಾವಿಮನಿ ಇದ್ದರು.