ತರಲಕಟ್ಟಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜಾ ಸಮಾರಂಭದಲ್ಲಿ ಸಚಿವ ಹಾಲಪ್ಪ ಆಚಾರ್ ಮಾತನಾಡಿದರು. 
ಜಿಲ್ಲೆ

ಪುರಾವೆ ಇಲ್ಲದ ಆರೋಪ ಸಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವ ಹಾಲಪ್ಪ ಆಚಾರ್

ಯಲಬುರ್ಗಾ: ಅಭಿವೃದ್ಧಿ ಕಾಮಗಾರಿ ನಡೆಸಲು ಸರ್ಕಾರ ಸಾಕಷ್ಟು ಅನುದಾನ ನೀಡುತ್ತ್ತಿದ್ದು, ಕಾಮಗಾರಿ ಕಳಪೆ ಆಗದಂತೆ ಅಧಿಕಾರಿಗಳ ಕಿವಿಹಿಂಡಿ ಕೆಲಸ ಮಾಡಿಸಿಕೊಳ್ಳುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ತರಲಕಟ್ಟಿ, ತಾಳಕೇರಿ, ಮರಕಟ್, ಚಿಕ್ಕಮನ್ನಾಪುರ ಹಾಗೂ ಗುಳೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನನ್ನ ಅಧಿಕಾರದ ಅವಧಿಯಲ್ಲಿ ನಡೆಯುವ ಯಾವುದೇ ಅಭಿವೃದ್ಧಿ ಕಾಮಗಾರಿಯಲ್ಲಿ ಕಳಪೆ ನಡೆಸಲು ಆಸ್ಪದ ನೀಡುವುದಿಲ್ಲ. ಜನರು ಒಗ್ಗಟ್ಟಾಗಿ ನಿಂತು ಕೆಲಸ ಮಾಡಿಸಿದಾಗ, ಕಾಮಗಾರಿ ದೀರ್ಘ ಕಾಲ ಬಾಳಿಕೆ ಬರಲು ಸಾಧ್ಯ ಎಂದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲಕ್ಷ ಕೋಟಿ ರೂ.ಹಗರಣ ಆಗಿದೆ. ಈಗ ಹಗರಣದ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕಿಲ್ಲ. ಪ್ರಚಾರದ ತೆವಲಿಗೆ ಯಾವ ವಿಷಯವೂ ಇಲ್ಲದೇ ಪೇಸಿಎಂ ಪೋಸ್ಟರ್ ಅಂಟಿಸುವ ಮೂಲಕ ಹೊಸ ರಾಗ ತೆಗೆದು ಪ್ರಚಾರ ಪಡೆದುಕೊಳ್ಳುತ್ತಿದೆ. ಶೇ.40 ಪರ್ಸೆಂಟ್ ಕುರಿತು ಯಾವುದೇ ಪುರಾವೆ ಇಲ್ಲದೆನೇ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಯಾವ ಯೋಗ್ಯತೆ ಇಲ್ಲ. ಆಧಾರ ಸಹಿತ ಆರೋಪ ಮಾಡಿದರೆ ಒಪ್ಪಬಹುದು. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ನಾಯಕರು ಸಿಎಂ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇಂಥ ವಿಚಾರಗಳಿಂದಾಗಿಯೇ ದೇಶದಲ್ಲಿ ಕಾಂಗ್ರೆಸ್ ಅಧೋಗತಿಗೆ ಸಾಗಿದೆ ಎಂದರು.

ಕ್ಷೇತ್ರದ ನೀರಾವರಿ ಬಗ್ಗೆ ಕಾಂಗ್ರೆಸ್‌ನವರು ಆಲೋಚಿಸದೇ ರೈತರಿಗೆ ಮೋಸ ಮಾಡಿದ್ದಾರೆ. ಈಗ ನೀರಾವರಿ ಕುರಿತು ರೀಲ್ ಬಿಡುವ ಕಾಂಗ್ರೆಸ್‌ನವರು ತಮ್ಮ ಅವಧಿಯಲ್ಲಿ ನಯಾ ಪೈಸೆ ಅನುದಾನವೂ ತಂದಿಲ್ಲ. ಇನ್ನೂ ನಾಲ್ಕೈದು ತಿಂಗಳಲ್ಲಿ ಕ್ಷೇತ್ರದ ಕೆರೆಗಳಿಗೆ ನೀರು ಹರಿಯಲಿದ್ದು, ಅಭಿವೃದ್ಧಿ ಮೂಲಕ ಉತ್ತರಿಸುವೆ. ಕಾಂಗ್ರೆಸ್‌ಗೆ ಜನರು ಮತ್ತೊಮ್ಮೆ ಪಾಠ ಕಲಿಸಲಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷೆ ಶರಣವ್ವ ಹನುಮಂತಪ್ಪ ಗೊಂದಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಶ್ರೀಶೈಲ ತಳವಾರ, ತಾಪಂ ಇಒ ಸಂತೋಷ ಪಾಟೀಲ್, ಗ್ರಾಪಂ ಸದಸ್ಯರಾದ ಪ್ರಕಾಶ ಮಾಲಿಪಾಟೀಲ್, ಬಸಪ್ಪ ಕೋಳೂರು, ಹನುಮೇಶ ವಡ್ಡರ್, ಮುಖಂಡರಾದ ಸಿ.ಎಚ್.ಪಾಟೀಲ್, ಶಿವಪ್ಪ ವಾದಿ, ಅಮರೇಶ ಹುಬ್ಬಳ್ಳಿ, ಪ್ರಭುಗೌಡ ಪಾಟೀಲ್, ಶಂಕರಗೌಡ ಟಣಕನಕಲ್, ಶಿವಕುಮಾರ ನಾಗಲಾಪುರಮಠ, ಕಳಕಪ್ಪ ಕಂಬಳಿ, ಅಯ್ಯನಗೌಡ ಕೆಂಚಮ್ಮನವರ್, ತೇಜನಗೌಡ ಪಾಟೀಲ್, ರಂಗನಾಥ ವಲ್ಮಕೊಂಡಿ, ರಾಚಪ್ಪ ಹುರಳಿ, ಆನಂದ ಈಳಿಗೇರ್, ಶರಣಪ್ಪ ಹೊಸ್ಕೇರಿ, ಶರಣಪ್ಪ ನಿಲೋಗಲ್, ಸಿದ್ರಾಮೇಶ ಬೇಲೇರಿ, ಅಶೋಕ ಅರಕೇರಿ, ದೊಡ್ಡಯ್ಯ ಗುರುವಿನ್, ಮಂಜು ಗಡಾದ ಸೇರಿದಂತೆ ಇತರರಿದ್ದರು.