ಯಲಬುರ್ಗಾ: ಜಗತ್ತಿಗೆ ಬೆಳಕು ನೀಡಿದ ಗಾಣಿಗ ಸಮಾಜದ ಕೊಡುಗೆ ದೊಡ್ಡದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಜಿಲ್ಲೆ ಹಾಗೂ ತಾಲೂಕು ಗಾಣಿಗರ ಸಂಘ ಹಾಗೂ ಗಾಣಿಗ ನೌಕರರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಮುದಾಯ ಬೆಳೆಯಬೇಕಾದರೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಸಮುದಾಯದ ನ್ಯಾಯಯುತ ಬೇಡಿಕೆ ಸಿಎಂ ಗಮನಕ್ಕೆ ತಂದು ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು. ಸರ್ಕಾರದಿಂದ ಗಾಣಿಗ ಸಂಘದ ಭವನ ನಿರ್ಮಾಣಕ್ಕೆ ಅನುದಾನ ಕೊಡಿಸಲಾಗುವುದು ಎಂದರು.
ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಸಿದ್ದೇಶ್ವರ ಸ್ವಾಮೀಜಿಯನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಬೇಡಿ. ತಮ್ಮ ವ್ಯಕ್ತಿತ್ವದ ಮೂಲಕ ಸಮಾಜ ಮೀರಿ ಬೆಳೆದವರು. ಅನ್ಯ ಸಮಾಜವನ್ನು ಪ್ರೀತಿ ವಿಶ್ವಾಸದಿಂದ ಕಂಡು ಬದುಕು ರೂಪಿಸಿಕೊಳ್ಳಬೇಕು ಎಂದ ಅವರು, ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ್ ಪುತ್ರ ಅರವಿಂದಗೌಡ ಪಾಟೀಲ್ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ನೀಡಿರುವುದು ಮಾದರಿ ಕೆಲಸ ಎಂದರು.
ಮಾಜಿ ಸಂಸದ ಎಸ್.ಕೆ.ಬೆಳ್ಳುಬ್ಬಿ ಹಾಗೂ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಸಮಾಜದ ಸಂಘಟನೆಗೆ, ಶಿಕ್ಷಣಕ್ಕೆ ಒತ್ತು ನೀಡಬೇಕು. ಗಾಣದ ಕಸುಬು ಪ್ರಾರಂಭಿಸುವ ಮೂಲಕ ಸಮುದಾಯದ ಆರೋಗ್ಯ ಕಾಪಾಡಬೇಕು ಎಂದರು.
ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ, ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಅಮರೇಗೌಡ ಪಾಟೀಲ್ ಬಯ್ಯಪುರ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಎಂಎಲ್‌ಸಿ ಶಿವರಾಜ ಸಜ್ಜನ, ಮಾಜಿ ಸಂಸದ ಕರಡಿ ಸಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ್, ಗಾಣಿಗ ಸಮಾಜದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು.
ಅದ್ದೂರಿ ಮೆರವಣಿಗೆ:ಕಾರ್ಯಕ್ರಮಕ್ಕೂ ಮುಂಚೆ ವಿಜಯಪುರದ ವನಶ್ರೀ ಮಠದ ಲಿ.ಜಗದ್ಗುರು ಜಯದೇವ ಸ್ವಾಮೀಜಿಗಳ ಭಾವಚಿತ್ರ ಮೆರವಣಿಗೆ ಕುಂಭ, ಕಳಸ, ಡೊಳ್ಳು ಕುಣಿತ, ವಾದ್ಯ ಮೇಳದೊಂದಿಗೆ ಪ್ರಮುಖ ವೃತ್ತಗಳ ಮೂಲಕ ನಡೆಯಿತು.
ಯಲಬುರ್ಗಾ ತಾಲೂಕಿನಲ್ಲಿ ಗಾಣಿಗ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ರಾಯರಡ್ಡಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್ ಎರಡು ಎಕರೆ ಭೂಮಿ ಕೊಡುವುದಾಗಿ ಘೋಷಿಸಿದ್ದಾರೆ. ಜಿಲ್ಲೆಯ ಹಾಲಿ ಮಾಜಿ ಶಾಸಕರು, ಸಚಿವರು ಅನುದಾನ ನೀಡುವುದಾಗಿ ಭರವಸೆ ನೀಡಿರುವುದು ಒಳ್ಳೆಯ ಬೆಳವಣಿಗೆ. ಸಮಾಜದವರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶ್ರಮಿಸಬೇಕು.ಡಾ.ಜಯಬಸವಕುಮಾರ ಸ್ವಾಮೀಜಿಗಾಣಿಗ ಗುರುಪೀಠ, ವನಶ್ರೀ ಸಂಸ್ಥಾನಮಠ, ವಿಜಯಪುರ