ಯಲಬುರ್ಗಾ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಶಾಸಕ ಬಸವರಾಜ ರಾಯರಡ್ಡಿ ಕೃಷಿಕರಿಗೆ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ, ರಾಯಚೂರು ಕೃಷಿ ವಿವಿ ಸಿಂಡಿಕೇಟ್ ಸದಸ್ಯ ತಿಮ್ಮಣ್ಣ ಚವಡಿ ಗಣ್ಯರಾದ ವೀರನಗೌಡ ಬಳೂಟಗಿ, ರೇವಣಪ್ಪ ಇತರರಿದ್ದರು.  
ಜಿಲ್ಲೆ

ಸರ್ಕಾರದಿಂದ ಜನಪರ ಆಡಳಿತ

ಕುರುವತ್ತಿ ಶ್ರೀಕಾಂತಪ್ಪ

ಯಲಬುರ್ಗಾ: ರಾಜ್ಯದ ರೈತರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆ ಜಾರಿಗೆ ತಂದು ಶ್ರಮಿಸುತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಗುರುವಾರ ರೈತರಿಗೆ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಿಸಿ ಮಾತನಾಡಿದರು. ಕೃಷಿ ಇಲಾಖೆ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೃಷಿ ಉಪಕರಣ ನೀಡುವ ಮೂಲಕ ಸರ್ಕಾರ ವಿಶೇಷ ಒತ್ತು ನೀಡಿದೆ. ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಗ್ಯಾರಂಟಿ ಯೋಜನೆಗಳ ಮೂಲಕ ಜನಪರ ಆಡಳಿತ ನೀಡುತ್ತಿದೆ. ಇದನ್ನು ಸಹಿಸದ ಕೆಲವರು ಆರೋಪ ಮಾಡುತ್ತಿರುವುದು ನ್ಯಾಯ ಸಮ್ಮತವಲ್ಲ ಎಂದರು.

ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜದ ಯಾವುದೇ ಸಮಸ್ಯೆಯಿಲ್ಲ. ಈಗಾಗಲೇ ಹೆಸರು ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಬಳಗೇರಿಗೆ ನೂತನ ವಸತಿ ಶಾಲೆ ಮಂಜೂರಾಗಿದೆ. ತಾಲೂಕಿನ ಚಿಕ್ಕಮ್ಯಾಗೇರಿ ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ 20 ಕೋಟಿ ರೂ. ವೆಚ್ಚದ ಟೆಂಡರ್ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ, ರಾಯಚೂರು ಕೃಷಿ ವಿವಿ ಸಿಂಡಿಕೇಟ್ ಸದಸ್ಯ ತಿಮ್ಮಣ್ಣ ಚವಡಿ ಮಾತನಾಡಿದರು.
ಪ್ರಮುಖರಾದ ಶರಣಪ್ಪ ಗಾಂಜಿ, ಸುಧೀರ್ ಕೊರ್ಲಹಳ್ಳಿ, ಕಳಕಪ್ಪ ಕುರಿ, ವೀರನಗೌಡ ಬನ್ನಪ್ಪಗೌಡ್ರು, ಈರಪ್ಪ ಕುಡಗುಂಟಿ, ಮಲ್ಲಿಕಾರ್ಜುನ ಜಕ್ಕಲಿ, ರೇವಣಪ್ಪ ಹಿರೇಕುರುಬರ, ಶಿವಕುಮಾರ ಆದಾಪುರ, ಛತ್ರಪ್ಪ ಛಲವಾದಿ, ಶಿವಾನಂದ ಬಣಕಾರ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಅಧಿಕಾರಿಗಳಾದ ಶಿವಪ್ಪ ಕೊಂಡುಗುರಿ, ಎಸ್.ಚಿ.ಚಿಂಚಲಿ, ಶಿವಾನಂದ ಮಾಳಗಿ, ಬಸವರಾಜ ಗದಗಿನ, ಸಿಬ್ಬಂದಿ ನಟರಾಜ ಬಿದರಿ, ಈರಪ್ಪ ಕಮ್ಮಾರ, ಕಲ್ಲಪ್ಪ ಕರಿಗೌಡ್ರು ಇತರರು ಇದ್ದರು.