ಯಲಬುರ್ಗಾ: ಬಸವಣ್ಣ, ಲೋಕ ಕಂಡ ವಿಸ್ಮಯ. ದೀನದಲಿತರ ಉಸಿರಾಗಿ ಬಂಡಾಯದ ಬಾವುಟ ಎತ್ತಿದ ಬಂಡಾಯಗಾರ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಡಾ.ಮಾತಾ ಗಂಗಾದೇವಿ ಹೇಳಿದರು.
ವನಜಭಾವಿ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳ ಗ್ರಾಮ ಘಟಕ ಉದ್ಘಾಟನೆ ಹಾಗೂ ಕೂಡಲಸಂಗಮದಲ್ಲಿ ಜನವರಿಯಲ್ಲಿ ನಡೆಯುವ 36ನೇ ಶರಣ ಮೇಳದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಜ್ಞಾನದ ಕತ್ತಲೆಯಿಂದ ನಮ್ಮಲ್ಲಿನ ಶಿವತತ್ವ ಅರಿವಿಗೆ ಬರುವುದಿಲ್ಲ. ಸಮರ್ಥ ಗುರು ಸಿಕ್ಕರೆ ನಮ್ಮ ನಿಜ ಸ್ವರೂಪ ಶಿವಸ್ವರೂಪವೆಂದು ತೋರಿಸಿಕೊಡಬಲ್ಲನು. ಶರಣರು ನಿರಂತರವಾಗಿ ಶಿವಭಾವದಲ್ಲಿಯೇ ಇರುತ್ತಾರೆ. ಶಿವತತ್ವ ಅರಿಯುವ ಪ್ರಯತ್ನ ಮಾಡದೆ ಭವಚಿಂತೆಯಲ್ಲಿ ಮುಳುಗಿರುವ ಮಾನವರಿಗೆ ಗುರು ಬಸವಣ್ಣನವರು ಎಚ್ಚರಿಸುತ್ತಾರೆಂದು ತಿಳಿಸಿದರು. 2023ರ ಜ.12, 13 ಮತ್ತು 14 ರಂದು ಕೂಡಲಸಂಗಮದಲ್ಲಿ 36ನೇ ಶರಣ ಮೇಳ ಜರುಗುತ್ತದೆ. ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ನಿವೃತ್ತ ಪಿಎಸ್‌ಐ ಬಸನಗೌಡ ಪೊ.ಪಾಟೀಲ್, ಕೊಪ್ಪಳದ ಬಸವೇಶ್ವರ ಚಾರಿಟಬಲ್‌ನ ರಾಜೇಶ್ ಶಶಿಮಠ ಜೋತಿ, ವೀರಾಪುರದ ಶಿವಬಸಯ್ಯ ಹಿರೇಮಠ ಮಾತನಾಡಿದರು. ಬಸವಧರ್ಮ ಪೀಠದ ಅನಿಮಿಶಾನಂದ ಸ್ವಾಮೀಜಿ, ಪ್ರಮುಖರಾದ ನಾಗನಗೌಡ ಜಾಲಿಹಾಳ, ಅಮರೇಶಪ್ಪ ಬಳ್ಳಾರಿ, ರೇಣುಕಪ್ಪ ಮಂತ್ರಿ, ಬಸವರಾಜ ಹೂಗಾರ, ನಂದಯ್ಯಸ್ವಾಮಿ ಹಿರೇಮಠ, ಶರಣಪ್ಪ ಹೊಸಳ್ಳಿ ಇತರರಿದ್ದರು.