ತಾವರಗೇರಾ ಪಟ್ಟಣದ ಬಜಾರ್ ರಸ್ತೆಯನ್ನು ಬಂದ್ ಮಾಡಿರುವುದು. 
ಜಿಲ್ಲೆ

ದೇವರಿಗೆ ಹರಕೆ ತೀರಿಸಲೂ ವೈರಸ್ ಭೀತಿ

Koppal

ಯಲಬುರ್ಗಾ: ಕರೊನಾ ಎರಡನೇ ಅಲೆ ಹರಡದಂತೆ ತಡೆಯಲು ಸರ್ಕಾರ ಈಗಾಗಲೇ ಲಾಕ್‌ಡೌನ್ ನಿಯಮ ಜಾರಿಗೊಳಿಸಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಜಾತ್ರೆಗಳು ರದ್ದಾದ ಪರಿಣಾಮ ಭಕ್ತರು ದೇವರಿಗೆ ಬೇಡಿಕೊಂಡ ಹರಕೆ ತೀರಿಸಲು ವೈರಸ್ ಅಡ್ಡಿಯಾಗಿದೆ.

ತಾಲೂಕಿನಲ್ಲಿ ಬೇಸಿಗೆ ಸಮೀಪಿಸಿದರೆ ಸಾಕು ಜಾತ್ರೆಗಳು ಆರಂಭವಾಗುತ್ತವೆ. ದೇವರಿಗೆ ಭಕ್ತರು ಬೇಡಿಕೊಂಡ ಹಲವು ವರ್ಷಗಳ ಹರಕೆ ತೀರಿಸಲು ಮುಂದಾಗುತ್ತಾರೆ. ದೀರ್ಘದಂಡ ನಮಸ್ಕಾರ, ವಿಶೇಷ ಪೂಜೆ, ಹರಕೆ ಬೇಟೆ ಪ್ರಾಣಿ ಬಲಿ ಕೊಡುವುದು, ಜವಳ ತೆಗೆಸುವುದು ಸೇರಿದಂತೆ ನಾನಾ ಹರಕೆ ತೀರಿಸಲು ಈ ಬಾರಿ ಮತ್ತೆ ಕರೊನಾ 2ನೇ ಅಲೆಯಿಂದ ಬ್ರೇಕ್ ಬಿದ್ದಿದೆ.

ಇನ್ನೂ ಜಾತ್ರೆಯಲ್ಲಿ ದೇವರಿಗೆ ವಿಶೇಷ ಪೂಜೆ, ಪೂಜಾರಿಗಳಿಂದ ಕಾಯಿ ಪವಾಡ, ಅಕ್ಕಿ ಪಾಯಸ, ಮಳೆ ಬೆಳೆ ಕುರಿತು ಕಾರ್ಣಿಕ ನುಡಿಯುವುದು, ಅಗ್ನಿಕುಂಡ ಪ್ರವೇಶದಂತಹ ಸಾಂಪ್ರದಾಯಿಕ ಪೂಜಾ ವಿಧಾನಗಳಿಗೆ ವೈರಸ್ ಅಡ್ಡಿಯಾದ ಹಿನ್ನೆಲೆಯಲ್ಲಿ ಭಕ್ತರಲ್ಲಿ ನಿರಾಶೆ ತಂದಿದೆ.

ಜಾತ್ರೆಗಳು ರದ್ದು
ಕರೊನಾ 2ನೇ ಶುರುವಾದ ದಿನದಿಂದ ವೈರಸ್ ಹರಡುವ ಭೀತಿಯಿಂದ ಸಭೆ, ಸಮಾರಂಭ ಹಾಗೂ ಜಾತ್ರೆಗಳನ್ನು ನಡೆಸದಂತೆ ಸರ್ಕಾರ ಕೋವಿಡ್ ಮಾರ್ಗಸೂಚಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಕಡಬಲಕಟ್ಟಿ, ಚಿಕ್ಕಬನ್ನಿಗೋಳ ತಾಂಡಾ, ಹೊಸಳ್ಳಿ, ಬಳೂಟಗಿ, ಮದ್ಲೂರು ಮತ್ತು ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಲಬಾವಿ, ತಾಳಕೇರಿ, ಗುನ್ನಾಳ, ಕಟಗಿಹಳ್ಳಿ, ಹುಣಸಿಹಾಳ ಗ್ರಾಮದ ವಿವಿಧ ದೇವರುಗಳ ಜಾತ್ರೆಗಳು ರದ್ದಾಗಿವೆ. ಹೀಗಾಗಿ ದೇವರಿಗೆ ಅರ್ಪಿಸುವ ನೈವೇದ್ಯ, ಕಾಯಿ ಕರ್ಪೂರ ಸಲ್ಲಿಸಲು ಅಡ್ಡಿಯಾಗಿದೆ.

ಕರೊನಾ 2ನೇ ಅಲೆ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಜಾರಿಗೊಳಿಸಿದ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಲಾಕ್‌ಡೌನ್‌ಗೆ ಜನರ ಸಹಕಾರ ಅಗತ್ಯ. ಜಾತ್ರೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ದೇವಸ್ಥಾನಗಳನ್ನು ಬಂದ್ ಮಾಡಿಸಲಾಗಿದೆ. 2ನೇ ಅಲೆಯ ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಎರಡು ಪ್ರಕರಣಗಳು ದಾಖಲಾಗಿವೆ.| ಶೀಲಾ ಮೂಗನಗೌಡ್ರ, ಪಿಎಸ್‌ಐ, ಬೇವೂರು ಪೊಲೀಸ್ ಠಾಣೆ

ಬಂದ್ ಮಾಡಿದಂತೆ ಮಾಡಿ ಒಳಗಡೆ ವ್ಯಾಪಾರ

ತಾವರಗೇರಾ: ರಾಜ್ಯದಲ್ಲಿ ಪ್ರಾರಂಭವಾದ ಜನತಾ ಕರ್ಯ್ೂಗೆ ಪಟ್ಟಣದಲ್ಲಿ ಬುಧವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಣದಲ್ಲಿ ಬೆಳ್ಳಗೆ 10ರ ವರೆಗೆ ಎಲ್ಲ ಅಂಗಡಿ ಮುಂಗಟ್ಟು ಗಳು ತೆರೆದಿದ್ದವು, ಇದಕ್ಕೂ ಜನರು ಲಾಕ್‌ಡೌನ್ ಆಗುತ್ತದೆ ಎಂಬ ಭಯದಲ್ಲಿ 15 ದಿನಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿಸಿದ್ದು ಬೆಳಂಬೆಳಗ್ಗೆ ಕಂಡು ಬಂತು. 10 ಗಂಟೆ ನಂತರ ಅಂಗಡಿಗಳನ್ನು ಬಂದ್ ಮಾಡಿಸಿದ್ದರೂ ಕೆಲವರು ಬಂದ್ ಮಾಡಿದಂತೆ ಮಾಡಿ ಒಳಗಡೆ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂತು. ಇನ್ನು ಮನೆಯಿಂದ ಹೊರಗಡೆ ಬರಬೇಡಿ ಎಂದು ಪೊಲೀಸರು ಮನವಲಿಸಿದರೂ ಸಹ ಕೆಲವರು ಸುಳ್ಳು ನೆಪ ಹೇಳಿ ಅನವಶ್ಯಕವಾಗಿ ತಿರುಗಾಡುತ್ತಾರೆಂದು ಹೆಸರು ಹೇಳಲಿಚ್ಚಿಸದ ಪೊಲೀಸರೊಬ್ಬರು ತಿಳಿಸಿದರು. ಇನ್ನು ಪಟ್ಟಣದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಎಸ್‌ಬಿಐ ಬ್ಯಾಂಕ್, ನಾಡ ಕಚೇರಿ, ಪಟ್ಟಣ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಶು ಆಸ್ಪತ್ರೆ, ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಇನ್ನುಳಿದ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ ಸಾರ್ವಜನಿಕರು ಕಡಿಮೆ ಪ್ರಮಾಣದಲ್ಲಿ ಕಂಡು ಬಂದರು.