ಯಲಬುರ್ಗಾ ತಾಪಂ ಕಚೇರಿಯಲ್ಲಿ ಮಂಗಳವಾರ ನಡೆದ ಸಮೀಕ್ಷೆ ಪೂರ್ವಭಾವಿ ಸಭೆಯಲ್ಲಿ ಶಿಕ್ಷಕರು ಪಾಲ್ಗೊಂಡಿದ್ದರು. 
ಜಿಲ್ಲೆ

ಮಕ್ಕಳ ಸಮೀಕ್ಷೆ ಕಾರ್ಯ ಕಡ್ಡಾಯ; ಶಿಕ್ಷಕರಿಗೆ ತಾಪಂ ಇಒ ಜಯರಾಮ ಚವ್ಹಾಣ್ ಸೂಚನೆ

ಯಲಬುರ್ಗಾ: ಶಿಕ್ಷಕರು ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುವುದು ಕಡ್ಡಾಯವಾಗಿದೆ ಎಂದು ತಾಪಂ ಇಒ ಜಯರಾಮ ಚವ್ಹಾಣ್ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕರೊನಾ ಮೂರನೇ ಅಲೆ ನಿಯಂತ್ರಣಕ್ಕಾಗಿ ಮಕ್ಕಳ ಸಮೀಕ್ಷೆ ಕಾರ್ಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸರ್ಕಾರ ಹಾಗೂ ಮೇಲಧಿಕಾರಿಗಳ ಆದೇಶ ಪಾಲಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ವೈಯಕ್ತಿಕ ಆರೋಗ್ಯದ ಕಾಳಜಿಯೊಂದಿಗೆ ಗುಣಮಟ್ಟದ ಸಮೀಕ್ಷಾ ಕಾರ್ಯಕ್ಕೆ ಶಿಕ್ಷಕರು ಆದ್ಯತೆ ನೀಡಬೇಕೆಂದು ಸೂಚಿಸಿದರು.

ಬಿಇಒ ಬಿ.ಮೌನೇಶ ಮಾತನಾಡಿ, ಸಮೀಕ್ಷಾ ಕಾರ್ಯವನ್ನು ಶಿಕ್ಷಕರು ಗಂಭೀರವಾಗಿ ಪರಿಗಣಿಸಬೇಕು. ಸಮೀಕ್ಷೆಯಲ್ಲಿ ಸಂಗ್ರಹಿಸಬಹುದಾದ ಮಾಹಿತಿಯನ್ನು ಶಿಕ್ಷಕರಿಗೆ ಈಗಾಗಲೇ ಒದಗಿಸಲಾಗಿದೆ. ನಿಗದಿತ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಶರಣಪ್ಪ ಕೊಪ್ಪದ, ಬಿಆರ್‌ಸಿ ಬಸವರಾಜ ಅಂಗಡಿ, ಸಿದ್ದಲಿಂಗಪ್ಪ ಶ್ಯಾಗೋಟಿ ಹಾಗೂ ಶಿಕ್ಷಕರು ಇದ್ದರು.