ಜಿಲ್ಲೆ

ಬೇಡ ಜಂಗಮ ಪ್ರಮಾಣ ಪತ್ರಕ್ಕಾಗಿ 27ರಂದು ಮೆರವಣಿಗೆ: ಯಲಬುರ್ಗಾ ಟಿಎಪಿಸಿಎಂಎಸ್ ಅಧ್ಯಕ್ಷ ಶಿವಕುಮಾರ ಹೇಳಿಕೆ

Koppal

ಯಲಬುರ್ಗಾ: ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಜ.27ರಂದು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಶಿವಕುಮಾರ ನಾಗಲಾಪುರಮಠ ಹೇಳಿದರು.

ಪಟ್ಟಣದ ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನದಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ ಮೆರವಣಿಗೆ ಮೂಲಕ ಆಗಮಿಸಿ, ಸಂಸ್ಥಾನ ಹಿರೇಮಠ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸುವುದಾಗಿ ತೀರ್ಮಾನಿಸಲಾಗಿದೆ ಎಂದರು.

ಸಿದ್ಧರಾಮೇಶ್ವರ ಸ್ವಾಮೀಜಿ, ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಜಂಗಮ ಸಮುದಾಯದವರು ಬುದ್ಧಿವಂತರಾದರೂ ಕೂಡ ಬಡವರಿದ್ದು, ಆರ್ಥಿಕವಾಗಿ ತೀರ ಹಿಂದುಳಿದಿದ್ದಾರೆ. ಸರ್ಕಾರ ಜಂಗಮ ಸಮುದಾಯಕ್ಕೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಬೇಕು. ಸಭೆಯಲ್ಲಿ ತೀರ್ಮಾನಿಸಿದಂತೆ ಜ.27 ರಂದು ಶಾಂತಿಯುತ ಮೆರವಣಿಗೆ ಮೂಲಕ ಚನ್ನಮ್ಮ ವೃತ್ತದ ಬಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುತ್ತದೆ ಎಂದರು. ಸಮುದಾಯದ ತಾಲೂಕು ಅಧ್ಯಕ್ಷ ವೀರಯ್ಯ ಸಂಗನಾಳಮಠ ಮಾತನಾಡಿದರು.

ಪ್ರಮುಖರಾದ ವಿರೂಪಾಕ್ಷಯ್ಯ ಗಂಧದ, ಪ್ರಭಯ್ಯಶಾಸ್ತ್ರಿ ಸೊಪ್ಪಿಮಠ, ಪಪಂ ಸದಸ್ಯರಾದ ಅಂದಯ್ಯ ಕಳ್ಳಿಮಠ, ಸಿದ್ದಲಿಂಗಸ್ವಾಮಿ ಉಳ್ಳಾಗಡ್ಡಿ, ಪ್ರಮುಖರಾದ ಕರಿಬಸಯ್ಯ ಬಿನ್ನಾಳ, ಅಂದಾನಯ್ಯ ಶ್ಲಾಡಲಗೇರಿಮಠ, ಸೋಮಲಿಂಗಯ್ಯ ಹಿರೇಮಠ, ಬಸವರಾಜ ಮಠದ, ಸಂಗಯ್ಯ ಹಿರೇಮಠ, ಶಶಿಧರ ಹಿರೇಮಠ, ಕಳಕಯ್ಯ ಶಿವಪ್ಪಯ್ಯನಮಠ, ಶರಣಯ್ಯ ಸಾಲಿಮಠ, ಶಿವಕುಮಾರ ಸರಗಣಾಚಾರ, ಬಸವಲಿಂಗಯ್ಯ ಜಡಿಮಠ ಇದ್ದರು.