ಯಲಬುರ್ಗಾ: ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಅಂಗನವಾಡಿ ಕೇಂದ್ರಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಸಂತ ಬಾವಿಮನಿ ಹೇಳಿದರು.
ಪಟ್ಟಣದ 14ನೇ ವಾರ್ಡ್‌ನ ಮೀನಾಕ್ಷಿ ನಗರದ 9ನೇ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂಗನವಾಡಿ ಪ್ರಾರಂಭೋತ್ಸವ ನಿಮಿತ್ತ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿದರು. ಕರೊನಾ ಸಂದರ್ಭ ಮಕ್ಕಳಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳನ್ನು ತಾತ್ಕಾಲಿಕ ಬಂದ್ ಮಾಡಲಾಗಿತ್ತು. ಕರೊನಾ ಹಾವಳಿ ಇದೀಗ ಕಡಿಮೆ ಆಗಿರುವುದರಿಂದ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಕಾರ್ಯಕರ್ತೆ ಮತ್ತು ಸಹಾಯಕಿಯರು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಂಗನವಾಡಿ ಸುತ್ತಮುತ್ತ ಸ್ವಚ್ಛತೆ ಕಾಪಾಡುವ ಜತೆಗೆ ಶುದ್ಧ ಕುಡಿವ ನೀರು, ಗುಣಮಟ್ಟದ ಆಹಾರ ಪದಾರ್ಥ ವಿತರಿಸಬೇಕು ಎಂದರು.
ಈ ಸಂದರ್ಭ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಭಾಗ್ಯಶ್ರೀ ಕಾಟ್ರಳ್ಳಿಮಠ, ಮಹಿಳಾ ಗುಂಪಿನ ಶಿವಲೀಲಾ ಚನ್ನನಗೌಡ, ಪ್ರಮುಖರಾದ ಘನವಂತೇಶ ಚನ್ನದಾಸರ, ಸುನೀಲ ಪವಾರ, ಕಳಕೇಶ ಬಾರಕೇರ, ಯಲ್ಲವ್ವ ಭಜಂತ್ರಿ, ಅಂಗನವಾಡಿ ಕಾರ್ಯಕರ್ತೆ ಶಾರದಾ ಆಲೂರು, ಸಹಾಯಕಿ ಜಾಫರ್‌ಬಿ ನೀಲಗಾರ ಸೇರಿದಂತೆ ಇತರರಿದ್ದರು.