ಯಲಬುರ್ಗಾ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಾಲಾಪೂರ್ವ ಶಿಕ್ಷಣ ಸಹಕಾರಿಯಾಗಿದೆ ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.
ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಕೆಆರ್‌ಡಿಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಟಾಟಾ ಟ್ರಸ್ಟ್ ಹಿಸೋ ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಪೂರ್ವ ಶಿಕ್ಷಣ ಬಲವರ್ಧನಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರು ಶಾಲಾಪೂರ್ವ ಶಿಕ್ಷಣದ ತರಬೇತಿ ಪಡೆದುಕೊಂಡು ಮಕ್ಕಳ ಬೌದ್ಧಿಕ, ಮಾನಸಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಬೇಕು. 3 ರಿಂದ 6 ವರ್ಷದ ಮಕ್ಕಳಿಗೆ ಕಾರ್ಯಕರ್ತೆಯರು ಆಟೋಟದ ಜತೆಗೆ ಬೋಧನೆ ಮಾಡಬೇಕು. ಕಲಿಕಾ ಸಾಮಗ್ರಿಗಳಿಂದ ಕ್ಯಾಲೆಂಡರ್ ಸಂಖ್ಯೆ ಎಣಿಕೆ, ಶಬ್ದ ಆಟ, ಗಣಿತ ಪೂರ್ವ ಶಿಕ್ಷಣ, ಓದುವ ತಯಾರಿ, ಸಂಗೀತ, ನಾಟ್ಯ, ಕಥೆ, ಭಾಷಾ ಜ್ಞಾನ, ಆಟಗಳು ಸೇರಿದಂತೆ ಕ್ರಿಯಾತ್ಮಕ ಚಟುವಟಿಕೆ ನಡೆಸಬೇಕು. ಶಿಸ್ತು, ಸಂಯಮ, ಹೊಂದಾಣಿಕೆ, ನಾಯಕತ್ವ ಮನೋಭಾವ ಬೆಳೆಸುವಂತೆ ಸಲಹೆ ನೀಡಿದರು.
ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ ಮಾತನಾಡಿದರು. ಅಂಗನವಾಡಿ ಹಿರಿಯ ಮೇಲ್ವಿಚಾರಕಿಯರಾದ ಲಲಿತಾ ನಾಯಕ್, ಮಾದವಿ ವೈದ್ಯ ಶಿವಪುತ್ರಮ್ಮ ಅಂಗಡಿ ಇತರರಿದ್ದರು.