ಯಲಬುರ್ಗಾ: ದೇಶದ ರಕ್ಷಣೆಗೆ ತಮ್ಮ ಪ್ರಾಣ ಮುಡಿಪಾಗಿಟ್ಟ ಯೋಧರ ಸ್ಮರಿಸಬೇಕು. ಜತೆಗೆ ಅವರ ಕುಟುಂಬದವರಿಗೆ ಗೌರವಿಸಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಧೀರ ಕೊರ್ಲಹಳ್ಳಿ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ, ಕಾಲೇಜು ಆಡಳಿತ ಮಂಡಳಿ, ಎನ್‌ಸಿಸಿ ಘಟಕದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಡಿಗೆ ಅನ್ನ ನೀಡುವ ರೈತ ಮತ್ತು ದೇಶದ ಗಡಿ ರಕ್ಷಣೆಗೆ ನಿಂತ ಸೈನಿಕರ ಕೊಡುಗೆ ಅಪಾರವಿದ್ದು ಅವರ ಸೇವೆ ಮರೆಯಬಾರದು. ಅವರ ನಿಸ್ವಾರ್ಥ ಸೇವೆ ನಮಗೆ ಮಾದರಿ ಎಂದರು.
ಯುವ ಜನತೆ ದೇಶ ಕಟ್ಟುವ ಕೆಲಸಕ್ಕೆ ಮುಂದಾದಾಗ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಲಕ್ಷಾಂತರ ಯೋಧರ ಹೋರಾಟದ ಫಲದಿಂದ ನಾವುಗಳು ನೆಮ್ಮದಿಯಿಂದ ಬದುಕುತ್ತಿದ್ದೇವೆ. ದೇಶದ ಸೇವೆ ಮಾಡುವುದು ಒಂದು ಪುಣ್ಯದ ಕಾರ್ಯ ಎಂದರು.
ನಿವೃತ್ತ ಸೈನಿಕ ಸುಖಮುನಿ ತೋಟದ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಭಾರತ ಸೈನಿಕರ ಶೌರ್ಯ, ತ್ಯಾಗ ಮರೆಯಲಾಗದು. ಯುವಕರು ರಾಜಕಾರಣಿಗಳ ಕೈಗೊಂಬೆಯಾಗದೆ ರಾಷ್ಟ್ರ ಪ್ರೇಮ, ದೇಶಕ್ಕಾಗಿ ದುಡಿಯುವ ಸಂಕಲ್ಪ ಮಾಡಬೇಕು. ದೇಶದ ರಕ್ಷಣೆ ಮಾಡುವ ಕೆಲಸ ಪವಿತ್ರವಾದದ್ದು ಎಂದರು.
ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು ಕ್ಯಾಂಡಲ್ ಹಚ್ಚಿ ಕಾರ್ಗಿಲ್ ಸಂದರ್ಭದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದರು. ನಂತರ ಕಾಲೇಜು ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಿವೃತ್ತ ಸೈನಿಕರಾದ ಪುಂಡಪ್ಪ ಅಡವಿಹಳ್ಳಿ, ಶಿವನಗೌಡ ಬನ್ನಪ್ಪಗೌಡ್ರು ಮಾತನಾಡಿದರು. ಕಾಲೇಜು ಪ್ರಾಚಾರ್ಯ ಕೆ.ಎಚ್.ಛತ್ರದ ಅಧ್ಯಕ್ಷತೆ ವಹಿಸಿದ್ದರು.