ಬಂಟ್ವಾಳ: ಯಕ್ಷಕಲಾ ಪೊಳಲಿಯ 29ನೇ ವರ್ಧಂತ್ಯುತ್ಸವ ಪ್ರಯುಕ್ತ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರಿಗೆ ಪೊಳಲಿ ಯಕ್ಷೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹಾಗೂ ಹಿರಿಯ ಧಾರ್ಮಿಕ ಮುಂದಾಳು ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಆಶೀರ್ವಚನ ನೀಡಿದರು. ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ಅಧ್ಯಕ್ಷತೆ ವಹಿಸಿದ್ದರು.
ವಿದ್ವಾಂಸ ಕದ್ರಿ ನವನೀತ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಪೊಳಲಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಭಟ್ ಪೊಳಲಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಭುವನೇಶ್ ಪಚ್ಚಿನಡ್ಯ, ಕರ್ನಿರೆ ಪ್ರತಿಷ್ಠಾನದ ಮುಖ್ಯಸ್ಥ ಪ್ರಭಾಕರ ಡಿ.ಸುವರ್ಣ ಭಾಗವಹಿಸಿದ್ದರು.
ಸಂಸ್ಥೆಯ ಸಂಸ್ಥಾಪಕ ಅ.ನ.ಭ.ಪೊಳಲಿ, ಸದಸ್ಯರಾದ ಸುಬ್ರಾಯ ಕಾರಂತ ಪೊಳಲಿ, ಲೋಕೇಶ್, ನವೀನ್ ಕಟ್ಟಪುಣಿ, ಸಂದೀಪ್ ಪೊಳಲಿ, ಯಶವಂತ ಕೋಟ್ಯಾನ್, ಅಕ್ಷಯ ನಾವಡ ಪೊಳಲಿ, ಸುಭಾಸ್ ಹೊಳ್ಳ, ಮೋಹನ್ ಮೊದಲಾದವರಿದ್ದರು.
ಸಂಚಾಲಕ ವೆಂಕಟೇಶ್ ನಾವಡ ಸ್ವಾಗತಿಸಿದರು. ಸಂಘಟಕ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿದರು.
ಹಿರಿಯ ಕಲಾವಿದರಾದ ಶಂಭು ಶರ್ಮ, ಕೆ.ಎಚ್. ದಾಸಪ್ಪ ರೈ, ಶ್ರೀಧರ ಐತಾಳ್ ಪಣಂಬೂರು, ಹಳುವಳ್ಳಿ ಗಣೇಶ್ ಭಟ್, ಗುರುಪ್ರಸಾದ್ ಬೊಳಿಂಜಡ್ಕ, ಸುರೇಂದ್ರ ಮಲ್ಲಿ ಗುರುಪುರ, ಸದಾಶಿವ ಕುಲಾಲ್ ವೇಣೂರು, ದಿನೇಶ್ ಶೆಟ್ಟಿ ಕಾವಳಕಟ್ಟೆ, ಮಾಧವ ಬಂಗೇರ ಕೊಳತ್ತಮಜಲು, ರವಿರಾಜ ಭಟ್ ಪನೆಯಾಲ, ವಳಕುಂಜ ರವಿಶಂಕರ್ ಭಟ್ ಅವರನ್ನು ಸನ್ಮಾನಿಸಲಾಯಿತು. ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಹಾಗೂ ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ಗೆ ಗೌರವಾರ್ಪಣೆ ಮಾಡಲಾಯಿತು. ಭೂಷಣ್ ಪೂಜಾರಿ ಕಲ್ಕುಟ ಹಾಗೂ ಮಾನ್ಯ ಪೊಳಲಿ ಅವರನ್ನು ಅಭಿನಂದಿಸಲಾಯಿತು. ಅಗಲಿದ ಕಲಾವಿದರ ಸಂಸ್ಮರಣೆ ನಡೆಸಲಾಯಿತು.