ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆಗಳಲ್ಲಿ 2007ರಲ್ಲಿ ಯಕ್ಷಗಾನವನ್ನು ಕಲಿಸುವ ಉದ್ದೇಶದಿಂದ ಹುಟ್ಟಿಕೊಂಡ ಯಕ್ಷಶಿಕ್ಷಣ ಟ್ರಸ್ಟ್ ಪ್ರತಿ ವರ್ಷ 40ಕ್ಕೂ ಮೇಲ್ಪಟ್ಟು ಶಾಲೆಗಳಲ್ಲಿ ಯಕ್ಷಗಾನವನ್ನು ಕಲಿಸುತ್ತಿದೆ. ಈ ಬಾರಿ ಕಾಪು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೂ ಅಭಿಯಾನ ವಿಸ್ತರಣೆಗೊಂಡಿದೆ. ಉಡುಪಿ 43, ಕಾಪು 15 ಮತ್ತು ಕುಂದಾಪುರ ಕ್ಷೇತ್ರಗಳಲ್ಲಿ 11 ಸೇರಿ ಒಟ್ಟೂ 69 ಪ್ರೌಢಶಾಲೆಗಳಲ್ಲಿ 31 ಗುರುಗಳು ಯಕ್ಷಶಿಕ್ಷಣ ನೀಡುತ್ತಿದ್ದಾರೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದರು.
ಬುಧವಾರ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ ಜರಗಿದ ಯಕ್ಷಶಿಕ್ಷಣ ಗುರುಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
ಬೈಂದೂರು ಶಾಸಕರು ತಮ್ಮ ಕ್ಷೇತ್ರದಲ್ಲೂ ಮುಂದಿನ ವರ್ಷ ಯಕ್ಷಶಿಕ್ಷಣ ಆರಂಭಿಸಬೇಕೆಂದು ಕೇಳಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಭಾಗವತ ಪಟ್ಲ ಸತೀಶ ಶೆಟ್ಟಿಯವರ ನೇತೃತ್ವದಲ್ಲಿ ಸುಮಾರು 30 ಶಾಲೆಗಳಲ್ಲಿ "ಯಕ್ಷಧ್ರುವ ಯಕ್ಷಶಿಕ್ಷಣ"ಆರಂಭಗೊಂಡಿದೆ ಎಂದು ಹೇಳಿದರು.
ಟ್ರಸ್ಟ್ ಸ್ಥಾಪಕ ಅಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿದರು. ಗುರುಗಳ ಪರವಾಗಿ ಹಿರಿಯರಾದ ಸದಾನಂದ ಐತಾಳರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್. ವಿ. ಭಟ್, ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು.