ಕಾಸರಗೋಡು: ಕರಾವಳಿಯ ಗಂಡುಮೆಟ್ಟಿನ ಕಲೆ ಯಕ್ಷಗಾನ ಮನರಂಜನೆ ಜತೆಗೆ ಕಲಾವಿದರಿಗೆ ಜೀವನ ಕಟ್ಟಿಕೊಟ್ಟ ಕಲಾ ಪ್ರಾಕಾರವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಸಂಪಾಜೆ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ವತಿಯಿಂದ ನಡೆದ ಯಕ್ಷಗಾನ ತಾಳಮದ್ದಳೆ ದಶಾಹ ಸಮಾರೋಪ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕೆ.ಕೆ.ಶೆಟ್ಟಿ, ಜ್ಯೋತಿಷಿ ಪದ್ಮನಾಭ ಶರ್ಮ ಇರಿಞೌಲಕುಡ ಮುಖ್ಯ ಅತಿಥಿಯಾಗಿದ್ದರು. ಬಡಗುತಿಟ್ಟಿನ ಹಿರಿಯ ಭಾಗವತ ಕೊಳಗಿ ಕೇಶವ ಹೆಗಡೆ ಅವರನ್ನು ಸ್ವಾಮೀಜಿ ಸನ್ಮಾನಿಸಿದರು. ಕಲಾವಿದ ವಾಸುದೇವ ರಂಗ ಭಟ್ಟ ಅವರನ್ನು ಸ್ವಾಮೀಜಿ ಆಶೀರ್ವದಿಸಿದರು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು. ಪ್ರತಿಷ್ಠಾನದ ಸದಸ್ಯ ಸೇರಾಜೆ ಸತ್ಯನಾರಾಯಣ ಭಟ್ಟ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ‘ಕೃಷ್ಣ ಸಂಧಾನ’ ಯಕ್ಷಗಾನ ತಾಳಮದ್ದಲೆ ಜರುಗಿತು.